ಸಿದ್ದಾಪುರದ ಕಾನಸೂರಿನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ರೋಗ ಹರಡದಂತೆ ಮುನ್ನಚ್ಚರಿಕೆವಹಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ಸಿದ್ದಾಪುರ ತಾಲೂಕಿನಲ್ಲಿ ಪ್ರತಿ ವರ್ಷವೂ ಮಂಗನ ಕಾಯಿಲೆ ಕಾಡಿಸುತ್ತಿದೆ. ಕೆಲ ತಿಂಗಳ ಹಿಂದೆ ಶಿರಸಿಯ ವ್ಯಕ್ತಿಯೊಬ್ಬರಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಇದೀಗ ಈ ವರ್ಷ ಸಿದ್ದಾಪುರದಲ್ಲಿ ಮೊದಲ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ. ಕಾನಸೂರಿನ ಕೋಡ್ಸರ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗೆ ಈ ರೋಗ ಆವರಿಸಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಟುಂಬವೊoದು ಕೂಲಿ ಕೆಲಸಕ್ಕೆ ಸಿದ್ದಾಪುರಕ್ಕೆ ಆಗಮಿಸಿದೆ. ಆ ಕುಟುಂಬದಲ್ಲಿನ 14 ವರ್ಷದ ಬಾಲಕನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ತಂಡ ಯೋಗ್ಯ ಚಿಕಿತ್ಸೆ ನೀಡುತ್ತಿದೆ. ರೋಗ ಹರಡದಂತೆ ಮುನ್ನಚ್ಚರಿಕೆವಹಿಸಬೇಕಾದ ಬಗ್ಗೆ ಅಧಿಕಾರಿಗಳು ಊರೂರು ಅಲೆದು ಮಾಹಿತಿ ನೀಡುತ್ತಿದ್ದಾರೆ.
ಈ ಹಿನ್ನಲೆ ತಾಲೂಕಾ ವೈದ್ಯಾಧಿಕಾರಿಗಳ ತಂಡ ಕೋಡ್ಸರಕ್ಕೆ ಭೇಟಿ ನೀಡಿದೆ. ಆ ಕುಟುಂಬದವರ ಆರೋಗ್ಯವನ್ನು ತಪಾಸಣೆ ನಡೆಸಿದ್ದು, `ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರನ್ನು ಭೇಟಿ ಮಾಡಬೇಕು’ ಎಂಬ ಸೂಚನೆ ಕೊಡಲಾಗಿದೆ.