ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳಲು ಬ್ಯಾಂಕ್ ಲಾಕರ್ ಸೌಲಭ್ಯವಿದ್ದರೂ ಅದನ್ನು ಬಳಸಿಕೊಳ್ಳದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ. ಅವರ ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ.
ಕಾರವಾರದ ಖುರ್ಸಾವಾಡದ ಬಳಿ ವಾಸವಾಗಿರುವ ಸ್ಮಿತಾ ಪಾವಸ್ಕರ್ ಅವರು ಪೊಲೀಸ್ ಅಧೀಕ್ಷಕರ ಕಚೇರಿಯ ಡಿಸಿಆರ್ಬಿ ವಿಭಾಗದಲ್ಲಿ ಎಎಸ್ಐ ಆಗಿದ್ದಾರೆ. ಜನವರಿ 1ರ ಬೆಳಗ್ಗೆಯಿಂದ ಜನವರಿ 2ರ ಸಂಜೆಯವರೆಗೂ ಅವರು ಮನೆಯಲ್ಲಿರಲಿಲ್ಲ. ಇದನ್ನು ಗಮನಿಸಿ ಹೊಂಚು ಹಾಕಿದ ಕಳ್ಳರು ಮನೆಯ ಬೀಗ ಮುರಿದಿದ್ದಾರೆ. ಇಂಟರ್ ಲಾಕ್ ಒಡೆದು, ಬೆಡ್ ರೂಮಿನಲ್ಲಿದ್ದ ಟ್ರಜರಿಯನ್ನು ಮುರಿದು ಅಲ್ಲಿದ್ದ ಒಡವೆಗಳನ್ನು ಅಪಹರಿಸಿದ್ದಾರೆ.
ಸಂಜೆ ಮನೆಗೆ ಬಂದು ನೋಡಿದ ಸ್ಮಿತಾ ಪಾವಸ್ಕರ್ ಅವರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಲಂಕುಷವಾಗಿ ಪರಿಶೀಲಿಸಿದಾಗ ಮನೆಯಲ್ಲಿದ್ದ 18.85 ಲಕ್ಷ ರೂ ಮೌಲ್ಯದ 37 ಗ್ರಾಂ ಬಂಗಾರದ ಆಭರಣ, 72 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಹಾಗೂ 10 ಸಾವಿರ ರೂ ಹಣವೂ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಕಾರವಾರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ವಿಷಯ ಅರಿತ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಿದಾಗ ಅಪರಿಚಿತ ದಡೂತಿ ದೇಹದ ವ್ಯಕ್ತಿಯೊಬ್ಬ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆತ ಮಾಸ್ಕ್ ಧರಿಸಿ ಟೋಪಿ ಹಾಕಿಕೊಂಡಿದ್ದರಿAದ ಮುಖ ಕಾಣಿಸುತ್ತಿಲ್ಲ.
ಅದಾಗಿಯೂ ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ. ಚಿತ್ರದಲ್ಲಿರುವ ಕಳ್ಳನನ್ನು ಕಂಡರೆ ಇಲ್ಲಿ ಫೋನ್ ಮಾಡಿ: 9480805220 ಅಥವಾ 9480805290