ಕುಮಟಾ: ಬಾಲ್ಯದಲ್ಲಿಯೇ ತಂದೆ ಕಣ್ಮರೆಯಾಗಿ ಕೊರೊನಾ ಅವಧಿಯಲ್ಲಿ ತಾಯಿ ಕಳೆದುಕೊಂಡ ಅಂಗವಿಕಲ ಬಾಲಕನಿಗೆ ಅಧಿಕಾರಿಗಳು ವಾರ್ಷಿಕ 40 ಸಾವಿರ ರೂ ಆದಾಯ ಪ್ರಮಾಣಪತ್ರ ನೀಡಿದ್ದಾರೆ. ಈ ಕಾರಣದಿಂದ 9 ವರ್ಷದ ಆಹಿಲ್ ಎಂಬಾತರಿಗೆಗೆ ಅಂಗವಿಕಲರಿಗೆ ನ್ಯಾಯಯುತವಾಗಿ ದೊರಯಬೇಕಿದ್ದ ವಿಕಲಚೇತನರ ವೇತನ ಸಿಗುತ್ತಿಲ್ಲ!
ಹಳಕಾರ ಗ್ರಾಮದ ಆಹಿಲ್ ಚಿಕ್ಕವನಿರುವಾಗಲೇ ಆತನ ತಂದೆ ಕಾಣೆಯಾಗಿದ್ದಾರೆ. ಕೊರನಾ ಕಾಲಘಟ್ಟದಲ್ಲಿ ಆತನ ತಾಯಿ ವನಪ್ಪಿದ್ದಾರೆ. ತಾಯಿಯನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂ ಸಾಲ ಮಾಡಿದರೂ ಕೊರೊನಾ ಕಾರಣ ಅವರು ಬದುಕಲಿಲ್ಲ. ಪ್ರಸ್ತುತ ಆಹಿಲ್ ತಮ್ಮ ಅಜ್ಜಿ ಜೊತೆ ವಾಸವಾಗಿದ್ದಾರೆ. ಆ ಅಜ್ಜಿಗೂ ಯಾವುದೇ ಆದಾಯ ಇಲ್ಲ. ಆಹಿಲ್ ದುಡಿಯುವ ವಯಸ್ಸಿನವನೂ ಅಲ್ಲ. ದುಡಿಯುವುಷ್ಟು ತ್ರಾಣವೂ ಮೈಯಲ್ಲಿಲ್ಲ.
ಆಹಿಲ್ ಶೇ 75ರಷ್ಟು ಮಾನಸಿಕ ಅಂಗವೈಕಲ್ಯ ಹೊಂದಿರುವ ಬಗ್ಗೆ ವೈದ್ಯಕೀಯ ವರದಿ ಪಡೆದಿದ್ದಾರೆ. 4ನೇ ತರಗತಿ ಓದುತ್ತಿರುವ ಆಹಿಲ್’ಗೆ 32 ಸಾವಿರ ರೂ ಮೀರದಂತೆ ಆದಾಯ ಪ್ರಮಾಣ ಪತ್ರ ನೀಡಿದರೂ ಸಾಕಿತ್ತು. ಆಗ, ಸರ್ಕಾರ ನೀಡುವ 1400ರೂ ಮಾಸಿಕ ನೆರವು ಆತನ ವಿದ್ಯಾಬ್ಯಾಸದ ಜೊತೆ ಕುಟುಂಬಕ್ಕೂ ನೆರವಾಗುತ್ತಿತ್ತು. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ತಮ್ಮ ಉದಾರತನ ತೋರಿಸಲಿಲ್ಲ.
ಆಹಿಲ್ ಅಜ್ಜ ಗುಜರಿ ಮಾರಾಟ ಮಾಡಿ ಬದುಕು ಕಂಡುಕೊ0ಡಿದ್ದು, ಪ್ರಸ್ತುತ ಅದೇ ಈ ಮೂವರ ಬದುಕಿಗೆ ಆಧಾರ. ಹೀಗಾಗಿ ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗ್ಸ ಅವರು ಇದೀಗ ಆಹಿಲ್’ಗೆ ನೆರವು ನೀಡುವ ತಯಾರಿ ನಡೆಸಿದ್ದಾರೆ. ಸುಧಾಕರ ನಾಯ್ಕ ಹಾಗೂ ಮುನ್ನ ಸಾಬ್ ಜೊತೆ ಸೇರಿ ಅನ್ಯಾಯಕ್ಕೊಳಗಾದ ಆಹಿಲ್’ಗೆ ಅಂಗವಿಕಲ ವೇತನ ನೀಡುವುದಕ್ಕಾಗಿ ಕಾನೂನು ಹೋರಾಟ ಶುರು ಮಾಡಿದ್ದಾರೆ.