ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ಹಗರಣವೊಂದರಲ್ಲಿ ಅಂಕೋಲಾದ ಇಬ್ಬರು ಭಾಗಿಯಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬನಶoಕರಿಯ ಸಾವಿತ್ರಮ್ಮ ಬಸವರಾಜ್ ಎಂಬಾತರು ಗಿರಿನಗರದ ಇಂಡಸ್ಇoಡ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಆ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿರುವ ಮೈಸೂರಿನ ಮೇಘನಾ ಅವರು ಅಂಕೋಲಾದ ಅನ್ವರ್ ಗೌಸ್, ವರದರಾಜ ನಾಯಕ ವಂದಿಗೆ ಎಂಬಾತರ ನೆರವು ಪಡೆದು ಸಾವಿತ್ರಮ್ಮ ಅವರ ಖಾತೆಯಲ್ಲಿದ್ದ 50 ಲಕ್ಷ ರೂ ಹಣ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಮೇಘನಾ ಅವರ ಪತಿ ಶಿವಪ್ರಕಾಶ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಸಾವಿತ್ರಮ್ಮ ಹಾಗೂ ಅವರ ಪತಿ ಬಸವರಾಜ್ ಮನೆ ಮಾರಾಟ ಮಾಡಿ 1 ಕೋಟಿ ರೂ ಹಣ ಪಡೆದಿದ್ದರು. ಅದನ್ನು ತಮ್ಮ ಜಂಟಿ ಖಾತೆಯಲ್ಲಿರಿಸಿಕೊಂಡಿದ್ದರು. ಸಾವಿತ್ರಮ್ಮ ಅವರ ಸಲುಗೆ ಬೆಳೆಸಿದ ಮೇಘನಾ ಎಫ್ಡಿ ಖಾತೆ ನವೀಕರಣ ನೆಪದಲ್ಲಿ ಆರ್ಟಿಜಿಎಸ್ ಅರ್ಜಿ ಮೇಲೆ ಅವರ ಸಹಿ ಪಡೆದಿದ್ದರು. ಜೊತೆಗೆ ಖಾಲಿ ಚೆಕ್ ಸಹ ಪಡೆದಿದ್ದರು.
ನಂತರ ಗೋಕರ್ಣದಲ್ಲಿ ರೆಸಾರ್ಟ ನಡೆಸುವ ವರದರಾಜ ನಾಯಕ ವಂದಿಗೆ ಅವರ ನೆರವು ಪಡೆದು ಅಂಕೋಲಾದ ಅನ್ವರ್ ಗೌಸ್ ಹೆಸರಿನಲ್ಲಿ ಕರ್ನಾಟಕ ಬ್ಯಾಂಕಿನಲ್ಲಿ ಖಾತೆ ತೆರೆದರು. ಅನ್ವರ್ ಗೌಸ್ ಖಾತೆಗೆ ಸಾವಿತ್ರಮ್ಮ ಅವರ ಖಾತೆಯಿಂದ 50 ಲಕ್ಷ ರೂ ಜಮಾ ಮಾಡಿದ್ದರು. . ಸಾವಿತ್ರಮ್ಮ ಅವರ ಮಗ ಇನ್ನೊಂದು ಎಫ್ಡಿ ಮಾಡಲು ಬ್ಯಾಂಕಿಗೆ ತೆರಳಿದಾಗ ಖಾತೆಯಲ್ಲಿ ಹಣ ಕಡಿಮೆಯಿರುವುದನ್ನು ನೋಡಿ ಪ್ರಶ್ನಿಸಿದರು. ಆಗ, ಬ್ಯಾಂಕ್ ಸಿಬ್ಬಂದಿ ಹಾಗೂ ಅಂಕೋಲಾದ ಇಬ್ಬರು ಸೇರಿ ಮಾಡಿದ ಕುತಂತ್ರ ಅರಿವಿಗೆ ಬಂದಿತು.
ಈ ಬಗ್ಗೆ ಸಾವಿತ್ರಮ್ಮ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆ ಪ್ರಕರಣದ ವಿಷಯವಾಗಿ ಪೊಲೀಸರು ಅಂಕೋಲಾದ ಅನ್ವರ್ ಗೌಸ್, ವರದರಾಜ ನಾಯಕ ವಂದಿಗೆ ಎಂಬಾತರನ್ನು ಬಂಧಿಸಿದ್ದಾರೆ.