ನ್ಯಾಯಾಲಯದ ವಶದಲ್ಲಿದ್ದ 7 ಸಾವಿರ ರೂ ಹಣ ಬಿಡಿಸಿಕೊಡಲು ಸರ್ಕಾರಿ ವಕೀಲರೊಬ್ಬರು 6 ಸಾವಿರ ರೂ ಲಂಚ ಬೇಡಿದ್ದಾರೆ. ಇದನ್ನು ಸಹಿಸದ ದಾಸನಕೊಪ್ಪದ ಪವನಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದು, ಹಣ ಸ್ವೀಕರಿಸುವ ವೇಳೆ ಶಿರಸಿ ಜೆಎಂಎಫ್ಸಿ ನ್ಯಾಯಾಲಯದ ಎಪಿಪಿ ಪ್ರಕಾಶ ಲಮಾಣಿ ಸಿಕ್ಕಿ ಬಿದ್ದಿದ್ದಾರೆ.
ಶಿರಸಿ ದಾಸನಕೊಪ್ಪದ ಗ್ರಾ ಪಂ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಅವರು ಲಂಚದ ವಿರುದ್ಧ ಹೋರಾಟಕ್ಕಾಗಿ ಸಮಾನ ಮನಸ್ಕರ ತಂಡವೊoದನ್ನು ರಚಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂಘದ ಸದಸ್ಯರು ಅನ್ಯಾಯ, ಅಕ್ರಮಗಳನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಬಸವರಾಜ ನಂದಿಕೇಶ್ವರಮಠ ಅವರ ಪುತ್ರ ಪವನಕುಮಾರ ಅವರ ಬಳಿ ಸರ್ಕಾರಿ ವಕೀಲ ಪ್ರಕಾಶ ಲಮಾಣಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದರು.
ಈ ಹಿಂದೆ ನಡೆದ ಮೊಬೈಲ್ ಕಳ್ಳತನ ಪ್ರಕರಣವೊಂದರಲ್ಲಿ ಗ್ರಾಮಸ್ಥರು ಕಳ್ಳರನ್ನು ಹಿಡಿದಿದ್ದರು. ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆ ವೇಳೆ ನ್ಯಾಯಾಲಯಕ್ಕೆ 6 ಸಾವಿರ ರೂ ಭದ್ರತಾ ಠೇವಣಿ ಪಾವತಿ ಮಾಡಲಾಗಿದ್ದು, ಆ ಹಣವನ್ನು ಮರಳಿ ಪಡೆಯಬೇಕಿತ್ತು. ಇದರೊಂದಿಗೆ ಈಚೆಗೆ ಮನೆಯಲ್ಲಿರುವ ಸಾಮಗ್ರಿ ಕಳ್ಳತನವೂ ನಡೆದಿದ್ದು, ಆ ವೇಳೆಯಲ್ಲಿಯೂ ಕಳ್ಳರ ಪತ್ತೆಯಾಗಿತ್ತು. ಮುದ್ದೆಮಾಲ್’ನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಅದನ್ನು ಸಹ ಬಿಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು.
ಈ ಎರಡೂ ಕಳ್ಳತನ ಪ್ರಕರಣದಲ್ಲಿನ ಹಣ ಹಾಗೂ ಮುದ್ದೆಮಾಲ್ ಬಿಡಿಸಿಕೊಳ್ಳುವುದಕ್ಕಾಗಿ ಪವನಕುಮಾರ ಓಡಾಟ ನಡೆಸಿದ್ದರು. ಆಗ, ಎದುರಾದ ಎಪಿಪಿ ಪ್ರಕಾಶ ಲಮಾಣಿ 6 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಲೋಕಾಯುಕ್ತ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಸಿಕ್ಕಿಬಿದ್ದ ವಕೀಲನನ್ನು ಜೈಲಿಗೆ ಕಳುಹಿಸಿದರು.