ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ನಡೆದ ಭೂ ಕಂಪನದ ಕಾರಣ ಹಾಗೂ ಮುನ್ನಚ್ಚರಿಕೆ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳ ತಂಡ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ದೇವಿಮನೆ ದೇಗುಲ ಅರ್ಚಕರ ಜೊತೆ ವಿವಿಧ ಊರಿನ ಜನರ ಹೇಳಿಕೆಯನ್ನು ಪಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಿಸೆಂಬರ್ 1ರ ಭಾನುವಾರ ಮಧ್ಯಾಹ್ನ 11.59ಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ಭೂ ಕಂಪನ ಉಂಟಾಗಿತ್ತು. ಪರಿಣಾಮ ಶಿರಸಿ, ಕುಮಟಾ ಹಾಗೂ ಯಲ್ಲಾಪುರ ತಾಲೂಕಿನ ಹಲವರಿಗೆ ಭೂಮಿ ಅಲುಗಾಡಿರುವುದು ಅನುಭವಕ್ಕೆ ಬಂದಿತ್ತು. ಆದರೆ, ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಪಕದಲ್ಲಿ ಈ ಬಗ್ಗೆ ದಾಖಲಾಗಿರಲಿಲ್ಲ. ಕೇಂದ್ರ ಸರ್ಕಾರ ಭೂ ಕಂಪನ ಆಗಿರುವುದನ್ನು ಸ್ಪಷ್ಟಪಡಿಸಿತ್ತು.
ಸೋಮವಾರ ಮಧ್ಯಾಹ್ನ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳಿಬ್ಬರು ಶಿರಸಿ ಹಾಗೂ ಕುಮಟಾ ತಾಲೂಕಿನ ವಿವಿಧ ಕಡೆ ಪ್ರವಾಸ ನಡೆಸಿ ಅಧ್ಯಯನ ನಡೆಸಿದ್ದರು. ಒಂದುವರೆ ದಿನಗಳ ಕಾಲ ವಿವಿಧ ಕಡೆ ಸಂಚರಿಸಿ ಅಧ್ಯಯನ ನಡೆಸಿದ ವಿಜ್ಞಾನಿಗಳು ಇದೀಗ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಅದರ ವರದಿ ಸಲ್ಲಿಸಿದ್ದಾರೆ.
ಭೂಮಿ ಭಾಗವಾಗಿಲ್ಲ..
`ಡಿಸೆಂಬರ್ 1ರ ಬೆಳಗ್ಗೆ 11.59ಕ್ಕೆ ಯಾಣದಿಂದ 12 ಕಿಮೀ ದೂರದ ಪೂರ್ವ – ಉತ್ತರ ದಿಕ್ಕಿನಲ್ಲಿ ಈ ಭೂ ಕಂಪನವಾಗಿದೆ’ ಎಂದು ತಜ್ಞರ ತಂಡ ಪುನರುಚ್ಚರಿಸಿದೆ. 5 ಕಿಮೀ ಆಳ ಪ್ರದೇಶದಲ್ಲಿ 3.5 ತೀವೃತೆ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದನ್ನು ದೃಢಪಡಿಸಿದೆ. ಆದರೆ, `ಈ ಭೂ ಕಂಪನದಿAದ ಭೂಮಿ ರಚನೆಯಲ್ಲಿ ಯಾವುದೇ ಬಿರುಕು ಮೂಡಿಲ್ಲ. ಯಾವುದೇ ಗಣಿಕಾರಿಕೆಯಿಂದ ಈ ಭೂ ಕಂಪನ ನಡೆದಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭೂಕಂಪಕ್ಕೆ ಕಾರಣವೇನು?
`ಭಾರೀ ಪ್ರಮಾಣದ ಮಳೆಯಿಂದ ಆದ ಅಡಚಣೆಯಿಂದ ಈ ಕಂಪನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಭೂಮಿಯ ಹೊರಪದರದಲ್ಲಿರುವ ಆಳವಲ್ಲದ ಪದರಗಳು ಮರುಹೊಂದಾಣಿಕೆ ಅಥವಾ ಸ್ಥಳಾಂತರದಿoದ ಕಂಪನವಾಗಿದೆ’ ಎಂದು ತಜ್ಞರು ಹೇಳಿದ್ದಾರೆ. `ಭೂಮಿಯ ಹೊರ ಪದರಗಳ ಹೊಂದಾಣಿಕೆ ಸಾಮಾನ್ಯ ಪ್ರಕ್ರಿಯೆ. ಹೀಗಾಗಿ ಭೂ ಕಂಪನದ ಕಾರಣದಿಂದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಅಧ್ಯಯನ ನಡೆಸಿದ ವಿಜ್ಞಾನಿಗಳು ಹೇಳಿದ್ದಾರೆ.