ಕಾರವಾರ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆ ಸೇವೆಯ ಬದಲು ಖಾಸಗಿ ಕೋರಿಯರ್ ಸೇವೆ ಬಳಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಮಕ್ಕಳ ನಿರ್ದೇಶನಾಲಯ 31 ಜಿಲ್ಲೆಯ ಅಧೀನ ಕಚೇರಿಗಳಿಗೆ ಸೂಚನೆ ನೀಡಿದೆ. ಹೀಗಾಗಿ ಕಳೆದ ಒಂದುವರೆ ವರ್ಷದಿಂದ ಮಕ್ಕಳ ರಕ್ಷಣಾ ಘಟಕದವರು ಅಂಚೆ ಸೇವೆ ಬಳಸುತ್ತಿಲ್ಲ. ಭವಿಷ್ಯದಲ್ಲಿ ಎಲ್ಲಾ ಇಲಾಖೆಗೂ ಈ ಸುತ್ತೋಲೆ ಅನ್ವಯವಾಗುವ ಸಾಧ್ಯತೆಯಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ `ತಾಂತ್ರಿಕ’ ಕಚ್ಚಾಟದಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ.
ಅಂಚೆ ಇಲಾಖೆಯ ಸೇವೆ ಪ್ರತಿ ಹಳ್ಳಿಗಳಲ್ಲಿಯೂ ಸಿಗುತ್ತದೆ. ಆದರೆ, ಕೋರಿಯರ್ ಸೇವೆ ಪಟ್ಟಣಕ್ಕೆ ಮಾತ್ರ ಸೀಮಿತ. ಗ್ರಾಮೀಣ ವಿಳಾಸಗಳಿಗೆ ಬರುವ ಸರ್ಕಾರಿ ಪತ್ರಗಳನ್ನು ಕೋರಿಯರ್ ಸೇವೆ ಒದಗಿಸುವವರು ಅಗತ್ಯವಿದ್ದವರಿಗೆ ತಲುಪಿಸುವುದಿಲ್ಲ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗಳನ್ನು ಸೇರಿ ಅನೇಕ ಪತ್ರ-ದಾಖಲೆಗಳು ಗ್ರಾಮೀಣ ಜನರಿಗೆ ಸಿಗುತ್ತಿಲ್ಲ. ಗ್ರಾಮೀಣ ವಿಳಾಸ ಹೊಂದಿದ ಟಪಾಲುಗಳನ್ನು ಕೋರಿಯರ್ ಪ್ರಾಂಚೈಸಿಯವರು ಮರಳಿ ಆಯಾ ಇಲಾಖೆಗಳಿಗೆ ರವಾನಿಸುತ್ತಿದ್ದಾರೆ. ಅದಾಗಿಯೂ ಮಕ್ಕಳ ರಕ್ಷಣಾ ಘಟಕದವರಿಗೆ ಖಾಸಗಿ ಕೋರಿಯರ್ ಸೇವೆ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ.
ಪ್ರಸ್ತುತ ಅಂಚೆ ಇಲಾಖೆ 20 ಗ್ರಾಂ ತೂಕದ ನೊಂದಾಯಿತ ಪತ್ರಗಳ ರವಾನೆಗೆ 22 ರೂ ಶುಲ್ಕ ವಿಧಿಸುತ್ತದೆ. ಅಷ್ಟೇ ತೂಕದ ಕೋರಿಯರ್ ಸೇವೆಗೆ 30 ರೂ ದರವಿದೆ. ಬೇರೆ ರಾಜ್ಯಗಳಿಗೆ ಕಾಗದ-ಪತ್ರ ರವಾನಿಸಲು ಕೋರಿಯರ್ ಸೇವೆಯಲ್ಲಿ ದುಪ್ಪಟ್ಟು ಹಣ ನೀಡುವುದು ಅನಿವಾರ್ಯ. ಆದರೆ, ಅಂಚೆ ಇಲಾಖೆ ಭಾರತದ ಎಲ್ಲಾ ಕಡೆ ಅಗ್ಗದ ದರದಲ್ಲಿಯೇ ಸೇವೆ ಒದಗಿಸುತ್ತದೆ. ಅದಾಗಿಯೂ 2023ರ ಜುಲೈ ತಿಂಗಳಿನಲ್ಲಿ ಮಕ್ಕಳ ನಿರ್ದೇಶನಾಲಯ ಖಾಸಗಿ ಸೇವೆ ಪಡೆಯುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೂ ಖಾಸಗಿ ಕೋರಿಯರ್ ಸೇವೆ ಪಡೆಯುವಂತೆ ಸೂಚಿಸಲಾಗಿದ್ದು, ಒಂದುವರೆ ವರ್ಷ ಕಳೆದರೂ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ!
ಇನ್ನೂ ನಿರ್ಧಿಷ್ಟ ಇಂಥಹುದೇ ಕೋರಿಯರ್ ಸೇವೆ ಪಡೆಯುವಂತೆಯೂ ಅಧಿಕಾರಿಗಳ ಮೇಲೆ ಮೇಲಧಿಕಾರಿಗಳ ಮೌಖಿಕ ಒತ್ತಡವಿದೆ. ಹೀಗಾಗಿ ಎಲ್ಲಾ ಜಿಲ್ಲೆಯಲ್ಲಿಯೂ ಒಂದೇ ಕಂಪನಿಯ ಖಾಸಗಿ ಕೋರಿಯರ್ ಸೇವೆಯನ್ನು ಪಡೆಯಲಾಗುತ್ತಿದೆ. `ಖಾಸಗಿ ಕೋರಿಯರ್ ಕಂಪನಿ ಹಾಗೂ ಮೇಲಧಿಕಾರಿಗಳ ಒಳ ಒಪ್ಪದಿಂದ ಸರ್ಕಾರಕ್ಕೆ ಹೊರೆಯಾಗುವುದರ ಜೊತೆ ಜನರಿಗೂ ಸೂಕ್ತ ಸೇವೆ ಸಿಗುತ್ತಿಲ್ಲ’ ಎಂಬ ಆರೋಪ ವ್ಯಕ್ತವಾಗಿದೆ. ಬೆಂಗಳೂರಿನ ಮಕ್ಕಳ ನಿರ್ದೇಶನಾಲಯವೂ 31 ಜಿಲ್ಲೆಗಳ ಬಾಲ ಮಂದಿರ, ವೀಕ್ಷಣಾಲಯ, ಅನುಪಾಲನಾ ಗೃಹ, ಶಿಶು ಮಂದಿರ, ಬುದ್ದಿಮಾಂದ್ಯ ಮಕ್ಕಳ ಶಾಲೆ, ಮಕ್ಕಳ ರಕ್ಷಣಾ ಅಧಿಕಾರಿಗಳು ಹಾಗೂ ಮಕ್ಕಳಾ ರಕ್ಷಣಾ ಘಟಕದವರಿಗೆ ಖಾಸಗಿ ಕೋರಿಯರ್ ಸೇವೆ ಬಳಸುವಂತೆ ಪತ್ರದ ಮೂಲಕವೇ ಸೂಚನೆ ಹೊರಡಿಸಿದೆ.
`ಅಂಚೆ ಬಿಲ್ಲುಗಳು ಖಜಾನೆ-2ದಲ್ಲಿ ಪಾವತಿ ಆಗುತ್ತಿಲ್ಲ. ಸರ್ಕಾರಿ ಸ್ಟಾಂಪ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಯುವುದಕ್ಕಾಗಿ ಖಜಾನೆ ಇಲಾಖೆಯಿಂದ ಆರ್‌ಬಿಐ ಜೊತೆ ಒಪ್ಪಂದ ನಡೆಯುತ್ತಿದ್ದು, ತೊಂದರೆ ನಿವಾರಣೆ ಆಗುವವರೆಗೂ ಖಾಸಗಿ ಕೋರಿಯರ್ ಸೇವೆಪಡೆದು ತಿಂಗಳಿಗೆ ಒಮ್ಮೆ ಸಪ್ಲೆ ಹಾಗೂ ಸರ್ವಿಸ್ ಅಡಿ ಅವರಿಗೆ ಹಣ ಪಾವತಿಸಿ’ ಎಂದು ಸೂಚಿಸಲಾಗಿದೆ. ಇದೇ `ಸಪ್ಲೆ ಹಾಗೂ ಸರ್ವೀಸ್’ ಅಡಿ ಅಂಚೆ ಇಲಾಖೆಗೆ ಹಣ ಪಾವತಿಗೆ ಅವಕಾಶವಿದ್ದರೂ ಅಂಚೆ ಇಲಾಖೆಗೆ ಹಣ ಪಾವತಿಸಲು ನಿರ್ದೇಶನಗಳಿಲ್ಲ. ಪ್ರಸ್ತುತ ಈ ಸಮಸ್ಯೆ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಮಾತ್ರ ಸೀಮಿತವಾಗಿದ್ದು, ಬೇರೆ ಇಲಾಖೆಯವರು ಅಂಚೆ ಸೇವೆಯನ್ನೇ ಅವಲಂಭಿಸಿದ್ದಾರೆ. `ಖಾಸಗಿ ಕೋರಿಯರ್ ಲಾಭಿ ಬೇರೆ ಇಲಾಖೆಯ ಕದವನ್ನು ತಟ್ಟಿದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಟಪಾಲು ಸೇವೆಗಳು ಅಂಚೆ ಇಲಾಖೆಯಿಂದ ದೂರವಾಗುವುದರಲ್ಲಿ ಅನುಮಾನವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.