ಕಾರವಾರ: ಭಾರತೀಯ ನೌಕಾನೆಲೆ ಸಿಬ್ಬಂದಿ ಮದ್ಯದ ನಶೆಯಲ್ಲಿ ರಂಪಾಟ ನಡೆಸಿದ್ದಾರೆ. ಮದ್ಯ ಸೇವನೆ ವೇಳೆ ಒಗ್ಗಟ್ಟಾಗಿದ್ದ ಸಿಬ್ಬಂದಿ ನಶೆ ಎರಿದ ನಂತರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವಿಡಿಯೋ ವೈರಲ್ ಆಗಿದೆ.
ಬುಧವಾರ ರಾತ್ರಿ 15 ಜನ ನೌಕಾನೆಲೆ ಸಿಬ್ಬಂದಿ ಮದ್ಯ ಸೇವನೆಗಾಗಿ ಕಾರವಾರ ನಗರಕ್ಕೆ ಆಗಮಿಸಿದ್ದು, ತಡರಾತ್ರಿಯವರೆಗೂ ಮೋಜು-ಮಸ್ತಿ ನಡೆಸಿದ್ದಾರೆ. ಅದಾದ ನಂತರ ಅವರ ನಡುವೆಯೇ ಮಾತಿಗೆ ಮಾತು ಬೆಳೆದು ವಾಗ್ವಾದ ಶುರುವಾಗಿದೆ. ಅಲ್ಲಿದ್ದವರು ಎರಡು ಗುಂಪಾಗಿ ಚದುರಿದ್ದು, ಪರಸ್ಪರ ಕಚ್ಚಾಟ ನಡೆಸಿದ್ದಾರೆ. ಕೆಲವರು ಹೊಡೆದಾಟ ಬಿಡಿಸುವ ಪ್ರಯತ್ನ ನಡೆಸಿದರೂ ತಳ್ಳಾಟ-ಕೆಟ್ಟ ಶಬ್ದಗಳ ನಿಂದನೆ ಕಡಿಮೆ ಆಗಲಿಲ್ಲ.
ರೆಸ್ಟೋರೆಂಟ್ ಆವರಣದಲ್ಲಿ ನಡೆಯುತ್ತಿದ್ದ ಜಗಳ ತಾರಕಕ್ಕೆ ಏರಿದಾಗ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ ತಪ್ಪಿಸುವ ಪ್ರಯತ್ನ ನಡೆಸಿದರು. ಆಗ ಅವರೆಲ್ಲರೂ ರಸ್ತೆಗೆ ಹೋಗಿ ಬಡಿದಾಡಿಕೊಂಡರು. ಆ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಸ್ಥಳೀಯರೊಬ್ಬರು ನೌಕಾ ಸಿಬ್ಬಂದಿಯ ರಂಪಾಟ ನೋಡಿ ಕಂಗಾಲಾದರು. ಕೊನೆಗೆ ತಮ್ಮ ಮೊಬೈಲ್ ಮೂಲಕ ಅದನ್ನು ಚಿತ್ರಿಕರಿಸಿ ವೈರಲ್ ಮಾಡಿದ್ದಾರೆ.




