ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುವ ಇಲಾಖೆಗಳಲ್ಲಿ ಒಂದಾದ ನೋಂದಣಿ ಇಲಾಖೆ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳವಾಗಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ಕಂಪ್ಯುಟರ್ ಆಪರೇಟರ್’ಗಳಿಗೆ ಕಳೆದ ಐದು ತಿಂಗಳಿoದ ವೇತನಕ್ಕಾಗಿ ಕಾಯುತ್ತಿದ್ದು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ 17ರಿಂದ ಕಂಪ್ಯುಟರ್ ಆಪರೇಟರ್’ಗಳು ಮುಷ್ಕರ ನಡೆಸಲಿದ್ದಾರೆ.
ಸರ್ಕಾರ ಗುತ್ತಿಗೆ ಆಧಾರದ ಮೂಲಕ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಕಂಪ್ಯುಟರ್ ಆಪರೇಟರ್ ನೇಮಕ ಮಾಡಿಕೊಂಡಿದೆ. ರಾಜ್ಯದಲ್ಲಿ ನೋಂದಣಿ ಇಲಾಖೆ ಮೂಲಕ 1070 ಜನ ಕಂಪ್ಯುಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 28 ಸಿಬ್ಬಂದಿ ನೇಮಕಾತಿ ನಡೆದಿದೆ. ಆದರೆ, ಗುತ್ತಿಗೆ ಕಂಪನಿಯವರು ಕೆಲಸ ಮಾಡುವವರಿಗೆ ಸರಿಯಾದ ಸೌಕರ್ಯ ಒದಗಿಸುತ್ತಿಲ್ಲ. ಈ ಬಗ್ಗೆ ಕಂಪ್ಯುಟರ್ ಆಪರೇಟರ್ ಸಂಘದವರು ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಫೆ 14ರ ಒಳಗೆ ಎಲ್ಲಾ ಬೇಡಿಕೆ ಈಡೇರಿಸುವಂತೆ ಕಂಪ್ಯುಟರ್ ಆಪರೇಟರ್ ಸಂಘದವರು ಒತ್ತಾಯಿಸಿದ್ದು, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನಲೆ ಫೆ 17ರಿಂದ ಎಲ್ಲಾ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಕಂಪ್ಯುಟರ್ ಆಪರೇಟರ್ ಸಿಬ್ಬಂದಿ ನಿರ್ಣಯಿಸಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ, ಹುದ್ದೆ ಖಾಯಂ ಮಾಡುವಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊರ ಗುತ್ತಿಗೆ ಕಂಪ್ಯುಟರ್ ಆಪರೇಟರ್ ಸಂಘ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.
ಇಡೀ ರಾಜ್ಯದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ನೋಂದಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾಕಾರರು ಮುಷ್ಕರ ನಡೆಸಲಿದ್ದು, ಪ್ರತಿಭಟನೆ ಅವಧಿಯಲ್ಲಿ ವಿವಿಧ ನೋಂದಣಿ ಸೇವೆಗಳು ಸ್ಥಗಿತವಾಗುವ ಸಾಧ್ಯತೆಗಳಿವೆ.




