ಶಿರಸಿ: 25 ವರ್ಷಗಳ ಹಿಂದೆ ನಿರ್ಮಿಸಿದ ಮರಾಠಿಕೊಪ್ಪ-ಧೋಬಿಹೊಂಡದ ರಸ್ತೆಗೆ ಈವರೆಗೂ ಮರುಡಾಂಬರೀಕರಣದ ಭಾಗ್ಯ ದೊರೆತಿಲ್ಲ. ಶಿರಸಿ ನಗರಭಾಗದಲ್ಲಿದ್ದರೂ ಈ ರಸ್ತೆ ಗ್ರಾಮೀಣ ರಸ್ತೆಗಿಂತಲೂ ಕೆಟ್ಟದಾದ ಅನುಭವ ನೀಡುತ್ತಿದೆ.
ಮರಾಠಿಕೊಪ್ಪದಿಂದ ಧೋಬಿಹೊಂಡಕ್ಕೆ ತೆರಳುವ ಮಾರ್ಗದಲ್ಲಿ 50ಕ್ಕೂ ಅಧಿಕ ಮನೆಗಳಿವೆ. ಎಲ್ಲರೂ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುತ್ತಾರೆ. ಆದರೂ, ರಸ್ತೆ ಅಭಿವೃದ್ಧಿ ಮಾತ್ರ ಅಲ್ಲಿನ ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ.
ಧೋಬಿಹೊಂಡಕ್ಕೆ ತೆರಳುವ ರಸ್ತೆ ಸಂಪೂರ್ಣ ಹೊಂಡಗಳಿoದ ಕೂಡಿದೆ. ಎಲ್ಲೆಂದರಲ್ಲಿ ಡಾಂಬರು ಕಿತ್ತು ಹೋಗಿರುವುದರಿಂದ ವಾಹನಗಳು ಮುಗ್ಗರಿಸುತ್ತಿವೆ. ಅನೇಕ ಅಪಘಾತಗಳು ಇಲ್ಲಿ ನಡೆದಿದೆ. ಆದರೆ, ಜನರ ಸಮಸ್ಯೆ ಬಗ್ಗೆ ಕಾಳಜಿವಹಿಸಿದವರಿಲ್ಲ.
ಮಾಹಿತಿಗಳ ಪ್ರಕಾರ ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಂದಿತ್ತು. ಆದರೆ, `ಗುತ್ತಿಗೆದಾರರು ಗಟಾರವನ್ನು ಮಾತ್ರ ನಿರ್ಮಿಸಿ ಕೈ ತೊಳೆದುಕೊಂಡಿದ್ದಾರೆ. ರಸ್ತೆ ಅಭಿವೃದ್ಧಿ ಬಗ್ಗೆ ಕೇಳಿಕೊಂಡರು ಆ ಬಗ್ಗೆ ಆಸಕ್ತಿವಹಿಸಿಲ್ಲ’ ಎಂಬುದು ಸ್ಥಳೀಯರ ದೂರು. `ಜನರ ಬೇಡಿಕೆಗೆ ಅನುಗುಣವಾಗಿ ರಸ್ತೆ ಸರಿಪಡಿಸಬೇಕು. ಮರುಡಾಂಬರೀಕರಣ ಮಾಡುವುದು ಉತ್ತಮ ಮಾರ್ಗ. ಇಲ್ಲವಾದಲ್ಲಿ ನಗರಸಭೆ ಎದುರು ಪ್ರತಿಭಟನೆ ಅನಿವಾರ್ಯ’ ಎಂದು ಅಲ್ಲಿನವರು ಎಚ್ಚರಿಸಿದ್ದಾರೆ.