ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾಗಿದ್ದ ಕೇರಳದ ಅರ್ಜುನನ ಲಾರಿಯನ್ನು ಬುಧವಾರ ನೀರಿನಿಂದ ಮೇಲತ್ತಲಾಗಿದೆ. ಲಾರಿಯ ಒಳಭಾಗದಲ್ಲಿ ಚಾಲಕ ಅರ್ಜುನನ ಶವವೂ ಸಿಕ್ಕಿದೆ.
ಗುಡ್ಡ ಕುಸಿತವಾದ 7 ದಿನಗಳವರೆಗೆ ಲಾರಿಯೊಳಗೆ ಅರ್ಜುನ ಬದುಕಿರುವ ಸಾಧ್ಯತೆ ಇತ್ತು. ಆ ಲಾರಿಯೊಳಗೆ ಚಾಲಕನಿಗೆ ಅಗತ್ಯವಿರುವಷ್ಟು ಗಾಳಿ ಹಾಗೂ ಆಹಾರ ಇದ್ದ ಬಗ್ಗೆ ವಾಹನದ ಮಾಲಕರು ಮಾಹಿತಿ ನೀಡಿದ್ದರು. ಹೀಗಾಗಿ ಆ ಅವಧಿಯಲ್ಲಿ ಮಣ್ಣಿನ ಅಡಿ ಲಾರಿ ಸಿಲುಕಿರುವ ಅನುಮಾನದ ಹಿನ್ನಲೆ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಆದರೆ, ಲಾರಿ ಹೆದ್ದಾರಿ ಮೇಲೆ ಬಿದ್ದ ಮಣ್ಣಿನ ಅಡಿ ಇಲ್ಲ ಎಂದು ನಂತರ ಅರಿವಿಗೆ ಬಂದಿದ್ದು, ನದಿ ಆಳದಲ್ಲಿ ಹುಡುಕಾಟ ಶುರುವಾಯಿತು.
ನದಿ ಆಳದ ಹುಡುಕಾಟಕ್ಕೆ ವಾತಾವರಣ ಸರಿಯಾಗಿರಲಿಲ್ಲ. ನದಿ ಹರಿವು ಜೋರಾಗಿದ್ದ ಕಾರಣ ಎರಡು ತಿಂಗಳ ಬಳಿಕ ಮೂರನೇ ಹಂತದ ಕಾರ್ಯಾಚರಣೆ ನಡೆಸಲಾಗಿದ್ದು, ಮೂರನೇ ಹಂತದ ಕಾರ್ಯಾಚರಣೆಯ ಮೂರನೇ ದಿನ ಅರ್ಜುನ ಓಡಿಸುತ್ತಿದ್ದ ಲಾರಿ ನದಿಯಿಂದ ಮೇಲೆ ಬಂದಿದೆ. ಆ ಲಾರಿಯ ಒಳಭಾಗದಲ್ಲಿ ಚಾಲಕ ಅರ್ಜುನನ ಅಸ್ತಿ ಮಾತ್ರ ಸಿಕ್ಕಿದೆ.