ದೇಶ-ವಿದೇಶಗಳಲ್ಲಿ ಉದ್ಯೋಗ ಕರೆಯೋಲೆ ಬಂದರೂ ಅದನ್ನು ತಿರಸ್ಕರಿಸಿ ಕುಮಟಾದಲ್ಲಿ ಜನಸೇವೆ ಮಾಡುತ್ತಿದ್ದ ಡಾ ಅನೀಲ ಹೆಗಡೆ ತಮ್ಮ 76ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಸಾವಿನ ನಂತರವೂ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಪ್ರಪಂಚ ನೋಡುತ್ತಿದ್ದಾರೆ!
ಡಾ ಅನೀಲ ಹೆಗಡೆ ಅವರು ಮೆದುಳು ಸಂಬoಧಿತ ರೋಗದಿಂದ ಬಳಲುತ್ತಿದ್ದರು. ಆದರೆ, ಅವರ ದೃಷ್ಠಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಕಣ್ಣಿನಲ್ಲಿ ಯಾವುದೇ ದೋಷವಿಲ್ಲದ ಕಾರಣ ಅವರ ಆಪ್ತರು ನೇತ್ರದಾನಕ್ಕೆ ಸಮ್ಮತಿ ನೀಡಿದರು.
ಡಾ ಅನೀಲ ಹೆಗಡೆ ಅವರು ಸಂಘಟನಾ ವಿಷಯದಲ್ಲಿ ಸಹ ಚತುರರಾಗಿದ್ದರು. ರೈತ ಸಂಘಟನೆ, ಹವ್ಯಕ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದರು. 70ನೇ ವಯಸ್ಸು ದಾಟಿದ ನಂತರವೂ ಅವರು ಕೃಷಿ ಕಾಯಕದಲ್ಲಿ ತೊಡಗಿದ್ದರು. ನದಿಯಲ್ಲಿ ಈಜುವುದು, ಬೆಟ್ಟ ಗುಡ್ಡಗಳನ್ನು ಹತ್ತಿ ಚಾರಣ ಮಾಡುವುದು ಎಂದರೆ ಈ ವೈದ್ಯರಿಗೆ ಅಪಾರ ಆಸಕ್ತಿ.
ಪರಿಸರ ವಿಷಯವಾಗಿ ಸಹ ಡಾ ಅನೀಲ ಹೆಗಡೆ ಅಪಾರ ತಿಳುವಳಿಕೆ ಹೊಂದಿದ್ದರು. ವೈಜ್ಞಾನಿಕ ವಿಶ್ಲೇಷಣೆಗಳ ಮೂಲಕ ಮೂಡನಂಬಿಕೆಗಳನ್ನು ದೂರ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಸಂಗೀತ-ಹಾರ್ಮೋನಿಯo ಕ್ಷೇತ್ರದಲ್ಲಿ ಸಹ ಅವರು ಹಿಂದೆ ಬಿದ್ದಿರಲಿಲ್ಲ.
ಬಡ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಕಾಳಜಿ ಹೆಚ್ಚಿತ್ತು. ಬಡವರ ಉನ್ನತ ವ್ಯಾಸಂಗಕ್ಕಾಗಿ ಡಾ ಹೆಗಡೆ ಅವರು ವಿದ್ಯಾಭ್ಯಾಸದ ವೆಚ್ಚ ನಿಭಾಯಿಸುತ್ತಿದ್ದರು. ಸಮಾಜಕ್ಕೆ ಡಾ ಅನೀಲ ಹೆಗಡೆ ಅವರ ಕೊಡುಗೆ ಅಪಾರವಾಗಿದ್ದು, ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.