ಕಳೆದ 33 ವರ್ಷಗಳಿಂದ ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರೂ ವಧು ಸಿಗದ ಬೇಸರದಲ್ಲಿ ಅರುಣ ಹೆಗಡೆ ತಮ್ಮ 58ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿದ್ದಾಪುರದ ಮಗದೂರು ಕೊಂಡ್ಲಿಯಲ್ಲಿ ಅರುಣ ಅಣ್ಣಪ್ಪ ಹೆಗಡೆ ತಮ್ಮ ಅಣ್ಣ-ತಮ್ಮಂದಿರ ಜೊತೆ ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ. ಸಾಕಷ್ಟು ಓಡಾಟ ನಡೆಸಿದರೂ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿರಲಿಲ್ಲ. ಇದೇ ವಿಷಯವಾಗಿ ಅವರು ಸದಾ ಬೇಸರದಲ್ಲಿರುತ್ತಿದ್ದರು.
ಯಾವುದೇ ಹಬ್ಬ-ಹರಿದಿನಗಳಿಗೆ ಹೋದರು ಅಲ್ಲಿ ಅವರು ತಮ್ಮ ಮದುವೆ ವಿಷಯ ಪ್ರಸ್ತಾಪಿಸುತ್ತಿದ್ದರು. ಮನೆಗೆ ಬಂದವರ ಬಳಿ ಸಹ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಮದುವೆ ಆಗದ ಕಾರಣ ಅರುಣ ಹೆಗಡೆ ಮಾನಸಿಕ ಖಿನ್ನತೆಗೆ ಸಹ ಒಳಗಾಗಿದ್ದರು.
ಅವರು ಬೇರೆಯವರ ಜೊತೆ ಬೆರೆಯುವುದನ್ನು ಕಡಿಮೆ ಮಾಡಿದ್ದರು. ಮದುವೆ ಆಗಿಲ್ಲ ಎಂಬ ಕೊರಗಿನಲ್ಲಿಯೇ ಫೆ 8ರಂದು ಅವರು ಕ್ರಿಮಿನಾಶಕವನ್ನು ಸೇವಿಸಿದ್ದರು. ಇದನ್ನು ಅರಿತ ಅವರ ಅಣ್ಣ ರಾಘವೇಂದ್ರ ಹೆಗಡೆ ತಕ್ಷಣ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅದಾದ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೂ ಕರೆದೊಯ್ದು ತಮ್ಮನನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ಆದರೆ, ಫೆ 17ರಂದು ಅರುಣ ಹೆಗಡೆ ಕೊನೆ ಉಸಿರೆಳೆದರು. ಈ ಸಾವಿನ ಬಗ್ಗೆ ರಾಘವೇಂದ್ರ ಹೆಗಡೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.