ಯಲ್ಲಾಪುರ: ಆನಗೋಡು ಕಾರೆಮನೆಯ ಗಣಪತಿ ಭಟ್ಟರು 103 ವರ್ಷಗಳ ಕಾಲ ಸಾತ್ವಿಕ ಜೀವನ ನಡೆಸಿ ಈ ಲೋಕದ ಯಾತ್ರೆ ಮುಗಿಸಿದರು.
ಇಳಿ ವಯಸ್ಸಿನಲ್ಲಿ ಸಹ ಅತ್ಯಂತ ಲವಲವಿಕೆಯಿಂದ ಬದುಕಿದ್ದರು. ಕಿವಿ ಕೇಳದಿರುವುದನ್ನು ಹೊರತುಪಡಿಸಿ ಅವರ ಬೇರೆ ಯಾವ ನ್ಯೂನ್ಯತೆಗಳು ಅವರಲ್ಲಿರಲಿಲ್ಲ. ಬಾಲ್ಯದ ದಿನಗಳ ಜೊತೆ ಇತ್ತಿಚಿನ ಎಲ್ಲಾ ವಿದ್ಯಮಾನಗಳ ಬಗ್ಗೆಯೂ ಅವರು ಸಾಕಷ್ಟು ಅರಿತಿದ್ದರು. ಅಷ್ಟೇ ಪ್ರಮಾಣದ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು. ಕಣ್ಣುಗಳು ಸಹ ಚುರುಕಾಗಿದ್ದವು.
ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವುದು ಅವರ ಅಭ್ಯಾಸವಾಗಿತ್ತು. ತೆಳ್ಳವು ದೋಸೆ-ತಂಬಳಿ ಊಟ ಅವರ ನೆಚ್ಚಿನ ಆಹಾರವಾಗಿತ್ತು. ಬೆಳಗ್ಗೆ 5 ಗಂಟೆಯ ಅವಧಿಗೆ ಎದ್ದು ಮನೆ-ತೋಟದ ಸುತ್ತ ಓಡಾಡುತ್ತಿದ್ದರು. ಇದೇ ಅವರ ಆಯಸ್ಸಿನ ಗುಟ್ಟು ಎನ್ನುವವರು ಹಲವರಿದ್ದಾರೆ. ಮನೆಗೆ ಬಂದವರೊಡನೆ ಹರಟುತ್ತ ಹಳೆ ಕಾಲದ ನೈಜ ಕಥೆಗಳನ್ನು ಅವರು ವಿಸ್ತಾರವಾಗಿ ಹೇಳುತ್ತಿದ್ದರು.
ಸೋಮವಾರ ಬೆಳಗ್ಗೆ ಅವರು ತಮ್ಮ ಜೀವನ ಅಧ್ಯಾಯವನ್ನು ಮುಗಿಸಿದರು.