ಯಲ್ಲಾಪುರ: ಸಾರ್ವಜನಿಕ ರಸ್ತೆ ಅಂಚಿನಲ್ಲಿ ದಟ್ಟವಾಗಿ ಬೆಳೆದ ಪೊದೆಗಳನ್ನು ಕಲ್ಲಳ್ಳಿಯ ಗುರುಪಾದ ಭಟ್ಟ ಏಕಾಂಕಿಯಾಗಿ ಸ್ವಚ್ಛ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಅಚವೆ ಅಂಗಡಿಬೈಲಿನ ಗುರುಪಾದ ಭಟ್ಟರು ಪ್ರಸ್ತುತ ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯಲ್ಲಿ ವಾಸವಾಗಿದ್ದಾರೆ. ಮಂಚಿಕೇರಿ ಬಳಿಯ ಕಲ್ಲಳ್ಳಿಯಲ್ಲಿ ಅವರು ಎರಡು ವರ್ಷದ ಹಿಂದೆ ಎರಡು ಎಕರೆ ತೋಟ ಖರೀದಿಸಿದ್ದಾರೆ. ಕಲ್ಲಳ್ಳಿಗೆ ಹೋಗಿ ಬರುವ ದಾರಿಯನ್ನು ಎರಡುವರೆ ದಿನಗಳ ಕಾಲ ಶ್ರಮದಾನ ನಡೆಸಿ ಸುಂದರಗೊಳಿಸಿದ್ದಾರೆ. ರಸ್ತೆಯ ಎರಡು ಬದಿ ಮುಳ್ಳುಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಅಣಲೆಸರದಿoದ ಕಲ್ಲಳ್ಳಿಯವರೆಗಿನ ರಸ್ತೆ ಅಂಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿ ಬೆಳೆದಿದ್ದು ಅದನ್ನು ಅವರು ಒಬ್ಬಂಟಿಯಾಗಿ ಸ್ವಚ್ಚಗೊಳಿಸಿದ್ದಾರೆ. ಇದರಿಂದ ಬೆದಹಕ್ಲು, ಅಣಲೆಸರ, ಕಲ್ಲಳ್ಳಿ, ಮರಾಠಿಕೇರಿ, ದೇವರಕಲ್ಲಳ್ಳಿ, ಬೈಚಗೋಳು ಭಾಗದವರ ನಿತ್ಯ ಓಡಾಟಕ್ಕೆ ಅನುಕೂಲವಾಗಿದೆ.
`ಈ ಭಾಗದ ಜನರ ಓಡಾಟಕ್ಕೆ ಗಿಡ-ಗಂಡಿಗಳು ಅಡ್ಡವಾಗಿದ್ದವು. ಅನೇಕ ವರ್ಷಗಳಿಂದ ಪೊದೆಗಳನ್ನು ತೆರವು ಮಾಡಿರಲಿಲ್ಲ. ರಸ್ತೆಯಲ್ಲಿ ವಾಹನ ಚಲಾಯಿಸುವ ಅನೇಕರು ಮುಳ್ಳು ಚುಚ್ಚಿ ನೋವು ಅನುಭವಿಸುತ್ತಿದ್ದರು. ಹೀಗಾಗಿ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ನಡೆಸಿದೆ’ ಎಂದು ಗುರುಪಾದ ಭಟ್ಟ ಹೇಳಿದರು.
`ವಿದ್ಯಾವಂತರು ಗ್ರಾಮೀಣ ಭಾಗದ ಕೃಷಿ ಚಟುವಟಿಕೆ ಮರಳುವುದು ಅಪರೂಪ. ಗುರುಪಾದ ಭಟ್ಟರು ಕೃಷಿ ಕೆಲಸಕ್ಕೆ ಮರಳುವ ಜೊತೆ ಸಾರ್ವಜನಿಕ ಹಿತ ಕಾಪಾಡುವ ಕೆಲಸವನ್ನು ಮಾಡಿದ್ದಾರೆ’ ಎಂದು ಯಲ್ಲಾಪುರ ವೈಟಿಎಸ್ಎಸ್’ನ ನಿವೃತ್ತ ಶಿಕ್ಷಕ ಯು ಎಸ್ ಭಟ್ಟ ಅವರ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.