ಕಾರವಾರ: ಹಣಕೋಣದಲ್ಲಿ ನಡೆದ ಉದ್ಯಮಿ ವಿನಾಯಕ ನಾಯ್ಕನ ಹತ್ಯೆ ಹಣಕ್ಕಾಗಿ ಅಲ್ಲ ಹೆಣ್ಣಿಗಾಗಿ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿಳಿ ಬಣ್ಣದ ಕಾರು ಅನುಮಾನಾಸ್ಪದವಾಗಿ ಸಂಚರಿಸಿದ ಮಾಹಿತಿ ಸಿಕ್ಕಿದ್ದು, ಆ ಕಾರಿನಲ್ಲಿಯೇ ಆರೋಪಿತರು ಬಂದು-ಹೋಗಿರುವ ಅನುಮಾನ ಕಾಡುತ್ತಿದೆ.
ಹಣಕೋಣದ ವಿನಾಯಕ ನಾಯ್ಕ ಭಾನುವಾರ ಬೆಳಗ್ಗೆ ಕೊಲೆಯಾಗಿದ್ದರು. ಕಬ್ಬಿಣದ ರಾಡು, ಕತ್ತಿಯಿಂದ ಹೊಡೆದು ಅವರನ್ನು ಕೊಲೆ ಮಾಡಲಾಗಿತ್ತು. ವಿನಾಯಕ ನಾಯ್ಕ ಪೂಣಾದಲ್ಲಿ ಉದ್ಯಮಿಯಾಗಿದ್ದು ಗಣೇಶ ಹಬ್ಬದ ಹಿನ್ನಲೆ ಊರಿಗೆ ಬಂದಿದ್ದರು. ಊರಿನ ದೇವಿ ಜಾತ್ರೆಯಲ್ಲಿ ಭಾಗವಹಿಸಿ ಮರಳಿ ಪೂನಾಗೆ ತೆರಳುವ ತಯಾರಿ ನಡೆಸಿದ್ದರು. ಆ ವೇಳೆಗಾಗಲೇ ನಾಲ್ವರು ಅವರ ಮನೆಗೆ ನುಗ್ಗಿ ಕೊಲೆ ಮಾಡಿದ್ದರು.
ವಿನಾಯಕ ನಾಯ್ಕ ಅವರ ಪತ್ನಿ ವೈಶಾಲಿ ನಾಯ್ಕ ಮೇಲೆ ಸಹ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಮಂಗಳೂರು ವಿಭಾಗದ ಐಜಿಪಿ ಅಮಿತ್ ಸಿಂಗ್ ಸಹ ಸ್ಥಳಕ್ಕೆ ಬಂದು ಹೋಗಿದ್ದಾರೆ. ಕಾರವಾರ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.
ತನಿಖಾ ತಂಡಕ್ಕೆ ಸಮೀಪದ ಬ್ಯಾಂಕಿನ ಸಿಸಿ ಟಿವಿಯಲ್ಲಿ ಬಿಳಿ ಬಣ್ಣದ ಕಾರು ಕಾಣಿಸಿದೆ. ಆ ಕಾರಿನ ಬೆನ್ನಿಡಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆ ಕಾರು ಗೋವಾ ಚೆಕ್ಪೋಸ್ಟ್ ಮೂಲಕ ಹಾದುಹೋಗಿರುವುದು ಈವರೆಗೆ ಗೊತ್ತಾಗಿದೆ. ಕಾರು ಮಾಹಿತಿ ಆಧರಿಸಿ ಒಬ್ಬನ ವಿಚಾರಣೆಯೂ ನಡೆದಿದೆ. ಹೊರ ರಾಜ್ಯದಿಂದ ಬಂದವರು ಕೊಲೆ ಮಾಡಿ ಪರಾರಿಯಾದ ಬಗ್ಗೆ ವಿಚಾರಣೆಗೆ ಒಳಗಾದವ ಮಾಹಿತಿ ನೀಡಿದ್ದು, ಉದ್ಯಮಿಯೊಬ್ಬರ ಕೈವಾಡ ಈ ಕೊಲೆ ಹಿಂದಿರುವ ಬಗ್ಗೆ ಚರ್ಚೆ ನಡೆದಿದೆ.
ಕಾರವಾರ ತಾಲೂಕಿನ ಉದ್ಯಮಿಯೊಬ್ಬ ಗೋವಾದಲ್ಲಿದ್ದು ಸಾವನಪ್ಪಿದ ವಿನಾಯಕ ನಾಯ್ಕ ಹಾಗೂ ಆ ಉದ್ಯಮಿ ನಡುವೆ ಕೌಟುಂಬಿಕ ವಿಷಯವಾಗಿ ಕಲಹ ನಡೆದಿತ್ತು. ಹೆಣ್ಣಿನ ವಿಚಾರವಾಗಿ ಇದು ದ್ವೇಷಕ್ಕೆ ತಿರುಗಿದ್ದು, ಕೊಲೆಗೆ ಇದೇ ಕಾರಣ ಎಂಬ ಅನುಮಾನಗಳು ದಟ್ಟವಾಗಿದೆ. ಕೊಲೆಯಾದ ನಂತರ ಆ ಉದ್ಯಮಿ ಸಹ ಕಣ್ಮರೆಯಾಗಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ.