ಅಕ್ಕ-ಪಕ್ಕದ ಮನೆಗಳಲ್ಲಿ ಸಾಕಿದ ಬೆಕ್ಕುಗಳು ಕಚ್ಚಾಟ ನಡೆಸಿದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದಾಂಡೇಲಿ ಪೊಲೀಸರು ಈ ಪ್ರಕರಣ ಬಗೆಹರಿಸಲು ತಲೆಬಿಸಿ ಮಾಡಿಕೊಂಡಿದ್ದಾರೆ!
ಹಳೆದಾoಡೇಲಿಯ ರೈಲ್ವೇ ಸ್ಟೇಷನ್ ಹತ್ತಿರ ವಾಸವಾಗಿರುವ ಜಮೀಲಾ ಮುಸ್ತಾಕ ಅಹ್ಮದ ಇಂಗಳಗಿ ಅವರು ಸಾಕಿದ ಬೆಕ್ಕು ಮಾ 13ರಂದು ಮನೆಯಿಂದ ಹೊರ ಹೋಗಿದೆ. ಆಗ, ಪಕ್ಕದ ಮನೆಯ ಶಾಹಿನ ಅಬ್ದುಲ ಮುನಾಫ ಜೋಪಡೆವಾಲೆ ಅವರ ಒಡೆತನದ ಬೆಕ್ಕು ಜಮೀಲಾ ಮುಸ್ತಾಕ ಅವರು ಸಾಕಿದ ಬೆಕ್ಕಿಗೆ ಕಚ್ಚಿದೆ.
ಈ ವಿಷಯವಾಗಿ ವಿಚಾರಿಸಲು ತೆರಳಿದ ಜಮೀಲಾ ಮುಸ್ತಾಕ ಅವರಿಗೆ ಮನೆಯಲ್ಲಿದ್ದ ಇಮಾಮಸಾಬ ಅವರು ಕೆಟ್ಟದಾಗಿ ಬೈದಿದ್ದಾರೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. `ಇಮಾಮಸಾಬ ಜೋಪಡೆವಾಲೆ, ಅಜಾನ ಜೋಪಡೆವಾಲೆ ಮತ್ತು ರಫೀಕ ಎಂಬಾತರು ಸೇರಿ ತನಗೆ ಕಲ್ಲಿನಿಂದ ಹೊಡೆದಿದ್ದಾರೆ’ ಎಂಬುದು ಜಮೀಲಾ ಅವರ ಪತಿ ಮುಸ್ತಾಕ ಅವರ ದೂರು.
`ಗಾಯವಾದ ಬೆಕ್ಕಿಗೆ ಚಿಕಿತ್ಸೆ ಕೊಡುತ್ತೇವೆ ಎಂದು ತಿಳಿಸಿದರೂ ಜಮೀಲಾ ಮನೆಯವರು ರಂಪಾಟ ನಡೆಸಿದ್ದಾರೆ. ನಿಮ್ಮ ಬೆಕ್ಕು ನಮ್ಮ ಬೆಕ್ಕನ್ನು ಸಾಯಿಸುತ್ತದೆ ಎಂದು ಕೂಗಾಡಿ ನಮ್ಮ ಮೇಲೆ ಕುಡಗೋಲಿನಿಂದ ಹೊಡೆದಿದ್ದಾರೆ’ ಎಂಬುದು ಎದುರುದಾರರ ಆರೋಪ. ಒಟ್ಟಿನಲ್ಲಿ ಎರಡು ಕಡೆಯವರ ಪ್ರಕರಣ ಆಲಿಸಿದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.