ಅoಕೋಲಾದ ಕೊಡ್ಲಗದ್ದೆಯಲ್ಲಿ ಅನಾಧಿಕಾಲದಿಂದಲೂ ಸಂಚರಿಸುತ್ತಿದ್ದ ಕಾಲುದಾರಿಯ ಓಡಾಟದ ವಿಷಯವಾಗಿ ಅಕ್ಕ-ಪಕ್ಕದಮನೆಯವರ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಸುಬ್ರಾಯ ಗಾಂವ್ಕರ್ ಗಾಯಗೊಂಡಿದ್ದಾರೆ.
ಕೊಡ್ಲಗದ್ದೆಯ ಸುಬ್ರಾಯ ಗಾಂವ್ಕರ್ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಗ್ಗೆ ಅರಿವಿದ್ದರೂ ಪಕ್ಕದಮನೆಯ ರಾಜೇಶ ಗಾಂವ್ಕರ್ ದಬ್ಬಾಳಿಕೆ ನಡೆಸಿದ ಬಗ್ಗೆ ಸುಬ್ರಾಯ ಗಾಂವ್ಕರ್ ಅವರ ಪತ್ನಿ ಸಾವಿತ್ರಿ ಗಾಂವ್ಕರ್ ಪೊಲೀಸ್ ದೂರು ನೀಡಿದ್ದಾರೆ. `ತಮ್ಮ ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಪುರೋಹಿತ್ಯ ಕೆಲಸ ಮಾಡಿಕೊಂಡಿದ್ದು, ಅವರು ಇಲ್ಲಿ ಇಲ್ಲದಿರುವ ವೇಳೆ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂದು ವೃದ್ಧ ದಂಪತಿ ಅಳಲು ತೋಡಿಕೊಂಡಿದ್ದಾರೆ.
`ಕೊಡ್ಲಗದ್ದೆಯಲ್ಲಿರುವ ಕೃಷಿ ಭೂಮಿಯೇ ನಮಗೆ ಆಧಾರ. ಆದರೆ, ಕೃಷಿಭೂಮಿಗೆ ತೆರಳಲು ಅಡ್ಡಿ-ಆತಂಕ ಎದುರಾಗುತ್ತಿದೆ. ಅನಾಧಿಕಾಲದಿಂದಲೂ ಓಡಾಡುತ್ತಿರುವ ರಸ್ತೆಗೆ ಈಚೆಗೆ ರಾಜೇಶ ಗಾಂವ್ಕರ್ ಅವರು ಅಡ್ಡಿಪಡಿಸುತ್ತಿದ್ದು, ಅದನ್ನು ಪ್ರಶ್ನಿಸಿದ ಕಾರಣ ಹಲ್ಲೆ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ. `ನಮ್ಮ ತೋಟದ ಬಳಿ ತಿರುಗಾಟ ನಡೆಸಿದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಬಂದಿರುವ ಬಗ್ಗೆ ಆ ದಂಪತಿ ಹೇಳಿಕೊಂಡಿದ್ದು, `ತಮಗೆ ರಕ್ಷಣೆ ನೀಡಿ’ ಎಂದು ಅಂಗಲಾಚಿದ್ದಾರೆ.
ಸದ್ಯ ಗಾಯಗೊಂಡ ಸುಬ್ರಾಯ ಗಾಂವ್ಕರ್ ಹಾಗೂ ಸಾವಿತ್ರಿ ಗಾಂವ್ಕರ್ ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದು, ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜಗಳದ ವಿಡಿಯೋ ಸಹ ವೈರಲ್ ಆಗಿದೆ. ಈ ಬಗ್ಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.