ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಬ್ರೀಟಿಷರ ಅವಧಿಯಲ್ಲಿ ನೀಡಿದ ಸೊಪ್ಪಿನ ಬೆಟ್ಟದ ಹಕ್ಕಿಗೆ ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಬಗ್ಗೆ ಎಲ್ಲಡೆ ಆಕ್ಷೇಪ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ಯಲ್ಲಾಪುರದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಜನ ಅಧಿಕಾರಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
`ಉತ್ತರ ಕನ್ನಡ ಜಿಲ್ಲೆಯ ಜನ 1869ರಿಂದಲೂ ಸೊಪ್ಪಿನ ಬೆಟ್ಟವನ್ನು ಬಳಸುತ್ತಿದ್ದಾರೆ. ತೋಟಕ್ಕೆ ಅಗತ್ಯವಿರುವ ಮಣ್ಣು ಹಾಗೂ ಸೊಪ್ಪನ್ನು ಅಲ್ಲಿಂದ ತರಲು ಆಗಿನ ಬೊಂಬೆ ಪ್ರೆಸಿಡೆನ್ಸಿ ಸರ್ಕಾರವೇ ಅನುಮತಿ ನೀಡಿದ್ದು, ಕೆನರಾ ಪ್ರಿವಿಲೆಜಿಸ್ ರೂಲ್ ಪ್ರಕಾರ ಬೆಟ್ಟ ಬಳಸುವ ಅವಕಾಶವನ್ನು ಮುಂದುವರೆಸಲಾಗಿದೆ. ಅದಾಗಿಯೂ ಅರಣ್ಯ ಸಿಬ್ಬಂದಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಅವರ ಹಕ್ಕು ಹೊಂದಿದ ಸೊಪ್ಪಿನ ಬೆಟ್ಟ ಪ್ರವೇಶಕ್ಕೂ ಅರಣ್ಯ ಸಿಬ್ಬಂದಿ ತಕರಾರು ಮಾಡುತ್ತಿದ್ದಾರೆ’ ಎಂದು ರೈತರು ದೂರಿದರು.
`ಸೊಪ್ಪಿನ ಬೆಟ್ಟಕ್ಕೆ ಸಂಬoಧಿಸಿ ಕಂದಾಯ ಇಲಾಖೆಯಲ್ಲಿ ಸಾಕಷ್ಟು ದಾಖಲೆಗಳಿವೆ. ರೈತರ ಪಹಣಿ ಪತ್ರಿಕೆಯಲ್ಲಿ ಸಹ ಸೊಪ್ಪಿನ ಬೆಟ್ಟದ ಹಕ್ಕು ದಾಖಲೆಗಳಿದ್ದು, ರೈತರ ಪರವಾಗಿರುವ ದಾಖಲೆಗಳ ಮೇಲೆ ಅರಣ್ಯಾಧಿಕಾರಿಗಳು ದಬ್ಬಾಳಿಕೆ ನಡೆಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು. `ಕೆಲ ವರ್ಷಗಳಿಂದ ವನ ಪಾಲಕರು, ಅರಣ್ಯ ರಕ್ಷಕರು ಬಡ ರೈತರಿಗೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ರೈತರಿಗೆ ಹಕ್ಕಿರುವ ಸೊಪ್ಪಿನ ಬೆಟ್ಟಕ್ಕೆ ಯಂತ್ರಗಳನ್ನು ತೆಗೆದುಕೊಂಡು ಹೋಗಲು ಕೊಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಸೊಪ್ಪಿನಬೆಟ್ಟದ ಸುತ್ತಲೂ ಬೇಲಿ ನಿರ್ಮಾಣ, ನಿಯಮಗಳ ಪ್ರಕಾರ ಆ ಪ್ರದೇಶದಲ್ಲಿ ವಿವಿಧ ಬೆಳೆಗಳ ಗಿಡ ನಾಟಿ, ಅನುಮತಿ ಪಡೆದು ಕಟ್ಟಡ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ನೀಡಬಾರದು. ಸೊಪ್ಪಿನಬೆಟ್ಟವನ್ನು ಪಹಣಿಯಲ್ಲಿ ಬ ಖರಾಬು ಎಂದು ಬದಲಾವಣೆ ಮಾಡಿದ್ದು, ಅದನ್ನು ಮೊದಲಿನಂತೆ ಅ ಖರಾಬಿಗೆ ಸೇರಿಸಬೇಕು. ಸ್ಟಿಪ್ ಸೇರಿದಂತೆ ರೈತರ ಹಕ್ಕುಗಳ ಸೌಲತ್ತುಗಳಿಗೆ ಅಡ್ಡಿಬರಬಾರದು. ಇದರೊಂದಿಗೆ ವನ್ಯಜೀವಿ ಹಾವಳಿಯಿಂದ ಆಗುವ ಬೆಳೆ ನಷ್ಟಗಳಿಗೂ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.
`ಬಿಸಗೋಡು ವ್ಯಾಪ್ತಿಯ ಫಾರೆಸ್ಟರ್ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು, ಅವರನ್ನು ಕೂಡಲೇ ಬೇರೆ ಕಡೆ ವರ್ಗಾಯಿಸಬೇಕು’ ಎಂದು ಆಗ್ರಹಿಸಿದರು. ಈ ಕುರಿತು ಉಪಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಿದರು.