ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತಮ್ಮ ಜಿಲ್ಲಾಧಿಕಾರಿ ಆಸನವನ್ನು ಯಲ್ಲಾಪುರದ ಸುದೀಪ್ತ ಅತ್ತರವಾಲ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಕೆಲಕಾಲ ಜಿಲ್ಲಾಧಿಕಾರಿಗಳ ಆಸನದಲ್ಲಿ ಕೂತ ವಿದ್ಯಾರ್ಥಿನಿ ತಾನೂ ಜಿಲ್ಲಾಧಿಕಾರಿಯಾಗುವ ಬಯಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ನಡೆದಿತ್ತು. ಇದರ ಉದ್ಘಾಟನೆಗೆ ಕಾರವಾರ ಬಾಡದ ಮೆಟ್ರಿಕ್ ಪೂರ್ವ ಬಾಲಕಿಯರ್ ಹಾಸ್ಟೆಲ್ ವಿದ್ಯಾರ್ಥಿನಿಯರು ಆಗಮಿಸಿದ್ದರು. ಅವರೆಲ್ಲರೂ ಉತ್ಸಾಹದಿಂದ ಜಿಲ್ಲಾಧಿಕಾರಿಯನ್ನು ಭೇಟಿಯಾದರು. ವಿದ್ಯಾರ್ಥಿನಿಯರೊಂದಿಗೆ ಅವರ ವಿದ್ಯಾಭ್ಯಾಸದ ಬಗ್ಗೆ ಲಕ್ಷ್ಮೀಪ್ರಿಯಾ ವಿಚಾರಿಸಿದರು. `ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ?’ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅಲ್ಲಿದ್ದ ವಿದ್ಯಾರ್ಥಿನಿಯರು, ಡಾಕ್ಟರ್, ಲಾಯರ್, ಇಂಜಿನಿಯರ್ ಆಗುವ ಆಸೆ ವ್ಯಕ್ತಪಡಿಸಿದರು. ಯಲ್ಲಾಪುರ ರವೀಂದ್ರ ನಗರದ 8ನೇ ತರಗತಿ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಅವರು `ನಾನು ನಿಮ್ಮ ಹಾಗೇ ಡೀಸಿ ಆಗಬೇಕು. ಅದಕ್ಕೆ ಏನು ಓದಬೇಕು?’ ಎಂದು ಮುಗ್ದವಾಗಿ ಪ್ರಶ್ನಿಸಿದರು. `ನೀನು ಇನ್ನೂ ಚಿಕ್ಕವಳಿದ್ದೀಯಾ. ಈಗಿನಿಂದಲೇ ಚೆನ್ನಾಗಿ ಓದು. ದಿನಪತ್ರಿಕೆಗಳನ್ನು ಓದಿ ಹೆಚ್ಚಿನ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕು. ಪದವಿ ಶಿಕ್ಷಣದ ನಂತರ ಯುಪಿಎಸ್ಸಿ ಪರೀಕ್ಷೆಗೆ ಅಗತ್ಯ ತರಬೇತಿ ಪಡೆದು, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆಗ ಡೀಸಿ ಆಗಲು ಸಾಧ್ಯ. ಇದಕ್ಕಾಗಿ ನಿರಂತರ ಶ್ರಮ ಪಡಬೇಕು’ ಎಂದು ಲಕ್ಷ್ಮೀಪ್ರಿಯಾ ಮನವರಿಕೆ ಮಾಡಿದರು. `ಜಿಲ್ಲಾಧಿಕಾರಿಯಾಗುವ ನಿನ್ನ ಕನಸನ್ನು ನನಸು ಮಾಡಿಕೊಳ್ಳಲು ಯಾವುದೇ ಸಂದರ್ಭದಲ್ಲೂ ಗುರಿಯಿಂದ ಹಿಂದೆ ಸರಿಯಬಾರದು‘ ಎಂಬ ಕಿವಿಮಾತನ್ನು ಹೇಳಿದರು. `ನಿನ್ನ ಕನಸಿಗೆ ನನ್ನಿಂದ ಈಗಿನಿಂದಲೇ ಪ್ರೇರಣೆ ಸಿಗಲಿ’ ಎನ್ನುತ್ತ ತಾವು ಕೂತಿದ್ದ ಖುರ್ಚಿಯಿಂದ ಇಳಿದು ಆ ವಿದ್ಯಾರ್ಥಿಯನ್ನು ಜಿಲ್ಲಾಧಿಕಾರಿ ಖುರ್ಚಿ ಮೇಲೆ ಕೂರಿಸಿದರು.
ಜಿಲ್ಲಾಧಿಕಾರಿ ಖುರ್ಚಿಯ ಮೇಲೆ ಕುಳಿತ ಸುದೀಪ್ತ ಶಂಕರ್ ಅತ್ತರವಾಲ್ ಅಲ್ಲಿನ ಹೊಣೆಗಾರಿಕೆ-ಜವಾಬ್ದಾರಿಗಳ ಬಗ್ಗೆ ತಿಳಿದುಕೊಂಡರು. ಕೆಲ ಕಾಲ ಆ ಖುರ್ಚಿ ಮೇಲೆ ಕುಳಿತು ಖುಷಿ ಅನುಭವಿಸಿದರು. ಅಲ್ಲಿದ್ದ ವಿದ್ಯಾರ್ಥಿನಿಯರ ಜೊತೆ ಡೀಸಿ ಫೋಟೋ ತೆಗೆಸಿಕೊಂಡರು. `ಜಿಲ್ಲಾಧಿಕಾರಿ ಖುರ್ಚಿಯ ಮೇಲೆ ಕೂತಿದ್ದರಿಂದ ಜೀವನದ ಬಗ್ಗೆ ಸ್ಪಷ್ಟ ಗುರಿ ಸಿಕ್ಕಿದೆ. ಎಷ್ಟೇ ಕಷ್ಟವಾದರೂ ನಾನು IAS ಓದುವೆ’ ಎಂದು ಸುದೀಪ್ತ ಪ್ರತಿಕ್ರಿಯಿಸಿದರು. `ಸಣ್ಣ ಸಮಯ, ಸಣ್ಣ ನಂಬಿಕೆ, ಸಣ್ಣ ಭರವಸೆ! ಕನಸುಗಳು ಕಾಯುತ್ತಿವೆ‘ ಎಂದು ವಿದ್ಯಾರ್ಥಿನಿಯರ ಜೊತೆಗಿನ ಫೋಟೋವನ್ನು ಡೀಸಿ ಲಕ್ಷ್ಮೀಪ್ರಿಯಾ ಅವರು ತಮ್ಮ ವಾಟ್ಸಪ್ ಸ್ಟೇಟಸ್ ಮೂಲಕ ಹಂಚಿಕೊ0ಡಿದ್ದಾರೆ.