ಕಾರವಾರ: ಮಾಜಾಳಿ ದಂಡೇಭಾಗ ಮಜರೆಯಲ್ಲಿ ಸ್ಮಶಾನ ಭೂಮಿಗಾಗಿ ಹೋರಾಟ ನಡೆದಿದೆ. ಇಲ್ಲಿನ ಅಂಬಿಗ ಸಮುದಾಯದವರು ತಲೆತಲಾಂತರಗಳಿ0ದ ಸ್ಮಶಾನ ಎಂದು ನಂಬಿದ್ದ ಭೂಮಿ ಇದೀಗ ಖಾಸಗಿ ಎಂದು ಗೊತ್ತಾಗಿದ್ದು, ಅಲ್ಲಿದ್ದ ಸ್ಮಶಾನವನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ.. ಊರಿನವರದ್ದು ತಪ್ಪು ಎಂದು ಹೇಳುವ ಹಾಗಿಲ್ಲ. ಜಾಗದ ಮಾಲಕರಿಗೂ ಅನ್ಯಾಯ ಆಗುವುದನ್ನು ಸಹಿಸುವಂತಿಲ್ಲ!
ದಾ0ಡೇಭಾಗದ ಪೂರ್ವ ದಿಕ್ಕಿನಲ್ಲಿದ್ದ ಸಮುದ್ರ ಕಿನಾರೆ ಬಳಿ ಅನಾಧಿಕಾಲದಿಂದಲೂ ಮೀನುಗಾರ ಸಮುದಾಯದವರು ಶವ ಸಂಸ್ಕಾರ ನಡೆಸುತ್ತಿದ್ದರು. ಶವ ಸಂಸ್ಕಾರಕ್ಕೆ ಈ ಪ್ರದೇಶ ಶ್ರೇಷ್ಠ ಎಂದು ಅವರು ನಂಬಿದ್ದರು. ಈಚೆಗೆ ತಾವು ಸ್ಮಶಾನ ಎಂದು ನಂಬಿದ್ದ ಭೂಮಿಯ ಅಭಿವೃದ್ಧಿಯನ್ನು ನಡೆಸಿದ್ದರು. ಆದರೆ, ತಮ್ಮ ಮಾಲ್ಕಿ ಭೂಮಿಯಲ್ಲಿ ಶವ ಸಂಸ್ಕಾರ ನಡೆಸುವುದನ್ನು ಕಾರವಾರದಲ್ಲಿರುವ ಕುಟುಂಬದವರು ವಿರೋಧಿಸಿದ್ದರು. ಈ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿದರೂ ನಂತರವೂ ಆ ಭೂಮಿಯನ್ನು ಸ್ಮಶಾನ ಎಂದೇ ಅಂಬಿಗರು ನಂಬಿದ ಕಾರಣ ಜಾಗದ ಮಾಲಕರು ಗ್ರಾ ಪಂ ಕಚೇರಿಗೆ ದೂರು ನೀಡಿದ್ದರು.
ಊರಿನಲ್ಲಿ ಬೇರೆ ಕಡೆ ಸ್ಮಶಾನ ಇದ್ದರೂ ಬೇರೆಯವರ ಜಾಗದಲ್ಲಿ ಹೆಣ ಸುಡುತ್ತಿರುವ ಬಗ್ಗೆ ಗ್ರಾ ಪಂ ಅಧಿಕಾರಿಗಳು ಅವಲೋಕಿಸಿದ್ದು, ಜಾಗದ ಮಾಲಕರ ಅರ್ಜಿ ಮೇರೆಗೆ ಅಲ್ಲಿ ಹೆಣ ಸುಡಲು ತಡೆ ಒಡ್ಡಿದರು. ಸ್ಮಶಾನ ಅಭಿವೃದ್ಧಿಗಾಗಿ ತಂದಿರಿಸಿದ ಕಬ್ಬಿಣಗಳನ್ನು ಆ ಜಾಗದಿಂದ ಹೊರಗಿಟ್ಟರು. ಈ ವಿಷಯವಾಗಿ ಅಧಿಕಾರಿಗಳು ಹಾಗೂ ಊರಿನವರ ನಡುವೆ ವಾಗ್ವಾದವೂ ನಡೆಯಿತು. ಪೊಲೀಸರು ಹಾಗೂ ತಹಶೀಲ್ದಾರರು ಸಹ ಈ ವೇಳೆ ಹಾಜರಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳಕ್ಕೆ ಹಾಜರಿದ್ದು ಜನ ಅವರ ಜೊತೆಯೂ ಜಗಳ ಮಾಡಿದರು.
`ಮಾಜಾಳಿ ಭಾಗದಲ್ಲಿ ಈಗಾಗಲೇ ನಾಲ್ಕು ಸ್ಮಶಾನಗಳಿವೆ. ಈ ಸಮುದಾಯದವರಿಗೆ ಬೇರೆ ಕಡೆ ಸ್ಮಶಾನ ಅಗತ್ಯವಿದ್ದರೆ ಅದಕ್ಕಾಗಿ ಜಾಗ ಹುಡುಕಾಟ ನಡೆಸಲಾಗುವುದು. ಆದರೆ, ಖಾಸಗಿಯವರ ಜಾಗದಲ್ಲಿ ಹೆಣ ಸುಡಲು ಆ ಜಾಗದ ಮಾಲಕರ ಅನುಮತಿ ಬೇಕಿದ್ದು, ಅತಿಕ್ರಮಣ ತೆರವು ಮಾಡುವಂತೆ ಮನವಿ ಮಾಡಿದ ಹಿನ್ನಲೆ ಗ್ರಾಮ ಪಂಚಾಯತದಿ0ದ ಅದನ್ನು ತೆರವು ಮಾಡಲಾಗಿದೆ’ ಎಂದು ತಹಶೀಲ್ದಾರ್ ನರೋನಾ ತಿಳಿಸಿದರು. ಆದರೆ, `ತಮಗೆ ಅದೇ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕು. ಬೇರೆ ಕಡೆ ಸ್ಮಶಾನ ಭೂಮಿ ಬೇಡ’ ಎಂದು ದಂಡೇಭಾಗದ 70ಕ್ಕೂ ಅಧಿಕ ಕುಟುಂಬದವರು ಪಟ್ಟು ಹಿಡಿದಿದ್ದು ಈ ವಿಷಯ ಇನ್ನೂ ಗೊಂದಲದಲ್ಲಿದೆ.
ತೆರವು ಕಾರ್ಯಾಚರಣೆ ವೇಳೆ ನಡೆದ ವಾಗ್ವಾದ-ಜಟಾಪಟಿಯ ವಿಡಿಯೋ ಇಲ್ಲಿ ನೋಡಿ..