ಮಂಗಳೂರು: ಜನಸೇವೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡದ `ಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್’ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ `ಸಹಾಯ ಹಸ್ತ ನೆರಳು ಮನೆ’ ನಿರ್ಮಿಸಿದೆ. ಡಿ 8ರಂದು ಬೆಳಗ್ಗೆ ಈ ಮನೆಯನ್ನು ರೇವತಿ ಅವರಿಗೆ ಹಸ್ತಾಂತರಿಸಲಾಗುತ್ತಿದೆ. ಈ ವೇಳೆ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಹಲವರಿಗೆ ಸನ್ಮಾನವೂ ನಡೆಯಲಿದೆ.
`ಆಸಕ್ತರ ಸೇವೆಯೇ ಪ್ರಮುಖ ಧ್ಯೇಯ’ ಎಂಬ ನಿಟ್ಟಿನಲ್ಲಿ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕೆಲಸ ಮಾಡುತ್ತಿದೆ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ಸಮರ್ಪಕ ಸೂರಿಲ್ಲದ ರೇವತಿ ಅವರ ಕುಟುಂಬಕ್ಕೆ ಮನೆ ನಿರ್ಮಿಸುವ ಮಹತ್ವದ ಜವಾಬ್ದಾರಿಯನ್ನು ಈ ಟ್ರಸ್ಟ್ ಪೂರ್ಣಗೊಳಿಸಿದೆ.
ಅನಾರೋಗ್ಯ ಪೀಡಿತರಿಗೆ ಧನ ಸಹಾಯದ ನೆರವು ನೀಡುವ ಯೋಜನೆ ಸಹ ಈ ಟ್ರಸ್ಟಿನಲ್ಲಿದೆ. ಸಹಾಯಹಸ್ತ ಲೋಕಸೇವಾ ಟ್ರಸ್ಟ್ 283 ಸೇವಾ ಯೋಜನೆಯ ಮೂಲಕ 78 ಲಕ್ಷ ರೂ ಹಣವನ್ನು ನೊಂದವರಿಗೆ ನೀಡಿದೆ. ಕೊರೋನಾ ಅವಧಿಯಲ್ಲಿ ಕಿಟ್ ವಿತರಣೆ, ಬಡವರ ಮನೆಗಳಿಗೆ ಸಿಮೆಂಟ್, ತಗಡು ಪೂರೈಕೆಯನ್ನು ಮಾಡಿದೆ.
ಪ್ರಸ್ತುತ ಮನೆ ಹಸ್ತಾಂತರ ಕಾರ್ಯಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟಿನ ಅರ್ಜುನ್ ಬಂಡರ್ಕಾರ್, ವೈದ್ಯ ಡಾ ಸುರೇಶ್ ಪುತ್ತೂರಾಯ, ಮುಳುಗು ತಜ್ಞ ಈಶ್ವರ್ ಮಲ್ಪೆ, ಪುತ್ತೂರು ನಗರ ಠಾಣಾ ಸಬ್ ಇನ್ಸ್’ಪೆಕ್ಟರ್ ಆಂಜನೇಯ ರೆಡ್ಡಿ, ಸಂಪ್ಯ ಠಾಣಾ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಸುಷ್ಮಾ ಭಂಡಾರಿ, ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಸ್ಥಾಪಕ ಸಚಿನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಮಾಜ ಸೇವಾ ಸಾಧಕರಾದ ಅರ್ಜುನ್ ಭಂಡರ್ಕಾರ್, ಈಶ್ವರ್ ಮಲ್ಪೆ, ಪ್ರತ್ಯೂಷಾ ಪೂಜಾರಿ ಅವರನ್ನು ಸನ್ಮಾನಿಸಲಾಗುತ್ತದೆ.