ಶಿರಸಿ: ಬಿಸಲಕೊಪ್ಪ ಗ್ರಾ ಪಂ ಕ್ರಾಸಿನ ಬಳಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಹೀಗಾಗಿ ಇನ್ಮುಂದೆ ಕೇಶವ ನಾಯ್ಕ ಇಲ್ಲಿ ಮಟ್ಕಾ ಆಡಿಸುವ ಹಾಗಿಲ್ಲ!
ಎಕ್ಕಂಬಿ ಬಳಿಯ ಕಾನಗದ್ದೆ ಕೇಶವ ನಾಯ್ಕ (34) ವ್ಯಾಪಾರಿ. ಬಿಸಲಕೊಪ್ಪ ಗ್ರಾ ಪಂ ತಿರುವಿನಲ್ಲಿ ಮಟ್ಕಾ ಆಡಿಸುವುದು ಅವರ ಖಯಾಲಿ. 1 ರೂಪಾಯಿಗೆ 80 ರೂ ನೀಡುವುದಾಗಿ ಜನರನ್ನು ಮರಳು ಮಾಡಿ ಕೇಶವ ನಾಯ್ಕ ಹಣ ಪಡೆಯುತ್ತಿದ್ದರು. ಅವರು ಹೇಳಿದ ಸಂಖ್ಯೆಯನ್ನು ತಮ್ಮ ಚೀಟಿಯಲ್ಲಿ ಬರೆದುಕೊಳ್ಳುತ್ತಿದ್ದ ಕೇಶವ ನಾಯ್ಕ, ಸಣ್ಣ ಚೀಟಿಯಲ್ಲಿ ಅದೇ ಸಂಖ್ಯೆ ಬರೆದು ಹಣ ಹೂಡಿದವರಿಗೆ ರಸೀದಿ ರೂಪದಲ್ಲಿ ಕೊಡುತ್ತಿದ್ದರು. ಜೂಜುಕೋರರು ಹಣ ಹೂಡಿದ ಸಂಖ್ಯೆ ಅವರಿಗೆ ಮರೆಯಬಾರದು ಎಂದು ಅವರು ಚೀಟಿ ಬರೆದು ಕೊಡುತ್ತಿದ್ದರು.
ನ 30ರಂದು ಕೇಶವ ನಾಯ್ಕ ಮಟ್ಕಾ ಆಡಿಸುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದರು. ಪೊಲೀಸ್ ಉಪನಿರೀಕ್ಷಕ ಪ್ರತಾಪ ಪಚ್ಚಗೋಳ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 1100ರೂ ಹಣವನ್ನು ವಶಕ್ಕೆ ಪಡೆದರು. ಓಸಿ ಹಣ ಪಡೆದು ಜೂಜಾಡಲು ಬಂದವರಿಗೆ ಚೀಟಿ ಕೊಡುವ ವೇಳೆಯಲ್ಲಿಯೇ ಪೊಲೀಸರು ಕೇಶವ ನಾಯ್ಕರನ್ನು ಹಿಡಿದರು. ಸಂಖ್ಯೆ ಬರೆದುಕೊಡಲು ಕಿಸೆಯಲ್ಲಿರಿಸಿಕೊಂಡಿದ್ದ ಸಣ್ಣ ಸಣ್ಣ ಕಾಗದದ ಚೂರುಗಳ ಜೊತೆ ಬಾಲ್ಪೆನ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆದರು.
ಈ ಟೇಲರ್’ಗೆ ಮಟ್ಕಾ ಪಾರ್ಟ ಟೈಂ ಕೆಲಸ!
ಸಿದ್ದಾಪುರ: ಬಟ್ಟೆ ಹೊಲಿದು ಬದುಕು ಕಟ್ಟಿಕೊಂಡಿರುವ ಶ್ರೀಧರ ಕಲ್ಮೆಟ್ಟು ಅವರಿಗೆ ಉತ್ತಮ ಆದಾಯವಿರಲಿಲ್ಲ. ಹೀಗಾಗಿ ಅವರು ಮಟ್ಕಾ ಆಡಿಸುವ ಮೂಲಕ ಆದಾಯಗಳಿಸುತ್ತಿದ್ದು, ಪೊಲೀಸರು ಕಾನೂನುಬಾಹಿರವಾದ ಈ ಆಟಕ್ಕೆ ತಡೆ ಒಡ್ಡಿದ್ದಾರೆ.
ಕೊಂಡ್ಲಿ ಮಾರಿಕಾಂಬಾ ನಗರದ ಶ್ರೀಧರ ಕಲ್ಮೆಟ್ಟು (40) ತಮ್ಮ ಮನೆ ಮುಂದೆಯೇ ಮಟ್ಕಾ ಆಡಿಸುತ್ತಿದ್ದರು. ನ 30ರಂದು ಸಿದ್ದಾಪುರ ಪಿಐ ಸೀತಾರಾಮ ಅವರನ್ನು ಹಿಡಿದರು. ಜನರಿಂದ ಸಂಗ್ರಹಿಸಿದ 720ರೂ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು.
ಮೀನು ಮಾರ್ಕೇಟ್ ಮುಂದೆ ಮಟ್ಕಾ ಜೋರು!
ಕುಮಟಾ: ದ್ವಾರಕಾ ಹೊಟೇಲಿನ ಹಳೆ ಮೀನು ಮಾರುಕಟ್ಟೆ ಎದುರು ಪಾನ್ ಅಂಗಡಿ ನಡೆಸುವ ಕೇಶವ ಗೌಡ ಮಟ್ಕಾ ಆಡಿಸುತ್ತಿದ್ದರು. ಕಾನೂನುಬಾಹಿರ ಆಟ ಆಡದಂತೆ ಪೊಲೀಸರು ಅವರಿಗೂ ಎಚ್ಚರಿಕೆ ನೀಡಿದರು.
ನೆಹರು ನಗರದ ಕೇಶವ ಗೌಡ ಅವರಿಗೆ ಬೀಡಾ ಅಂಗಡಿ ಪ್ರಮುಖ ಆದಾಯ. ಅದಾಗಿಯೂ ಮಟ್ಕಾ ಆಡಿಸುವುದು ಎಂದರೆ ಅವರಿಗೆ ಮೋಜು. ಹೀಗಾಗಿ ಅವರು ಮಟ್ಕಾ ಆಡಿಸಿ ಹಣಗಳಿಸುತ್ತಿದ್ದರು. ಈ ಆಟ ನಿಯಮಬಾಹಿರ ಎಂಬ ಅರಿವಿದ್ದರೂ ಕದ್ದು ಮುಚ್ಚಿ ವಹಿವಾಟು ನಡೆಸುತ್ತಿದ್ದರು. ಪಾನ್ ಅಂಗಡಿಗೆ ಬರುವವರಿಗೆ ಆಮೀಷ ಒಡ್ಡಿ ಹಣ ಪಡೆಯುತ್ತಿದ್ದರು.
ಪಿಎಸ್ಐ ಮಂಜುನಾಥ ಗೌಡರ್ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 910ರೂ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಕೇಶವ ಗೌಡರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.