`ಕುಮಟಾದ ಕಾಗಾಲ ಗ್ರಾಮದಲ್ಲಿ ಅನಾದಿಕಾಲದಿಂದಲೂ ಜನರು ಬಳಸುತ್ತಿದ್ದ ಕಾಲು ದಾರಿಯನ್ನು ಅರಣ್ಯ ಇಲಾಖೆ ಖಾಸಗಿಯವರಿಗೆ ನೀಡಲು ಮುಂದಾಗಿದೆ. ಅರಣ್ಯಾಧಿಕಾರಿಗಳು ರಾಜ್ಯ ಹಾಗೂ ಕೇಂದ್ರಕ್ಕೆ ಸುಳ್ಳು ದಾಖಲೆ ನೀಡಿ, ಕಾಯ್ದಿರಿಸಿದ್ದ ಅರಣ್ಯ ಪ್ರದೇಶವನ್ನು ದುರ್ಬಳಕೆ ಮಾಡಿದ್ದಾರೆ’ ಎಂದು ಸಮಾಜ ಸೇವಕ ಆರ್ ಎಚ್ ನಾಯ್ಕ ದೂರಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಾಲು ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ನಿರ್ಮಾಣ ಮಾಡಲು ಲ್ಯಾಂಡ್ ಆರ್ಮಿ ಆಸಕ್ತಿವಹಿಸಿದೆ. ಆದರೆ, ಆ ಪ್ರದೇಶ ಕಾಯ್ದಿರಿಸಿದ ಅರಣ್ಯ ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು. ಇದೀಗ ಸುಳ್ಳು ದಾಖಲೆ ಸೃಷ್ಠಿಸಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.
`ಕಾಯ್ದಿರಿಸದ ಅರಣ್ಯ ಪ್ರದೇಶವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಬೇಕಾದರೆ ಹಲವಾರು ಹಂತಗಳಿವೆ. ಏಕಾಏಕಿ ನೀಡಲು ಬರುವುದಿಲ್ಲ. ಇಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ಜನಸಾಮಾನ್ಯರು ದಿನನಿತ್ಯದ ಓಡಾಟಕ್ಕೆ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ ಅದೇ ಜಾಗವನ್ನು ಬೇರೆಯವರಿಗೆ ನೀಡಲಾಗುತ್ತಿದೆ’ ಎಂದರು.
`ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರ ಪುನರ್ ಪರಿಶೀಲನೆ ಮಾಡಲು ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಇದಕ್ಕೆ ಪ್ರತ್ಯೇಕ ಸಮಿತಿ ರಚನೆಯಾಗಬೇಕು’ ಎಂದು ಆಗ್ರಹಿಸಿದರು.