ಸಿದ್ದಾಪುರ: ಮಹಿಳೆಯರು ರಿಪೇರಿಗೆ ನೀಡುವ ಮೊಬೈಲಿನಲ್ಲಿನ ಖಾಸಗಿ ಫೋಟೋ ಕದ್ದು ನಂತರ ಅವರನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ತಿಮ್ಮಪ್ಪ ನಾಯ್ಕ ಸರ್ಕಲ್ ಬಳಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಸುರಗಾಲ ನಿವಾಸಿ ಓಂಕಾರ ನಾಯ್ಕ ಅಂಗಡಿಗೆ ಮಹಿಳೆಯೊಬ್ಬರು ಆಗಮಿಸಿದ್ದರು. ತಮ್ಮ ಮೊಬೈಲ್ ಹಾಳಾದ ಕಾರಣ ಅದನ್ನು ಅಲ್ಲಿ ರಿಪೇರಿಗೆ ನೀಡಿದ್ದರು. ಆ ಮೊಬೈಲಿನಲ್ಲಿದ್ದ ಫೋಟೋಗಳನ್ನು ಕದ್ದ ಅಂಗಡಿ ಮಾಲಕ ಅದನ್ನು ದುರುಪಯೋಗಪಡಿಸಿಕೊಂಡಿದ್ದು, 2 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಕೃತ್ಯಕ್ಕೆ ಕೊಂಡ್ಲಿಯ ದಿನೇಶ್ ಕೃಷ್ಣ ನಾಯ್ಕ, ಮಂಜುನಾಥ್ ಅಣ್ಣಪ್ಪ ಗೌಡ ಜೊತೆಯಾಗಿದ್ದರು.
ಈ ಮೂವರು ಪದೇ ಪದೇ ಫೋನ್ ಮಾಡಿ `ಫೋಟೋ ಡಿಲಿಟ್ ಮಾಡಲು ಹಣ ಕೊಡಬೇಕು’ ಎಂದು ಕಾಡಿಸುತ್ತಿದ್ದರು. ಆ ಮಹಿಳೆಯ ಪತಿ ಮೊಬೈಲ್ ಮಳಿಗೆಗೆ ಬಂದು ಈ ಬಗ್ಗೆ ಪ್ರಶ್ನಿಸಿದ್ದರು. ಆಗ ಸಹ `2 ಲಕ್ಷ ರೂ ಕೊಡಿ, ಕಾಡಿಸಲ್ಲ’ ಎಂದು ಹೇಳಿದ್ದರು. `ಹಣ ಕೊಡದೇ ಇದ್ದರೆ ಎಲ್ಲಾ ಫೋಟೋಗಳನ್ನು ಎಲ್ಲಡೆ ಹರಿಬಿಡುತ್ತೇವೆ’ ಎಂದು ಬೆದರಿಸಿದ್ದರು.
ದಿಕ್ಕು ತೋಚದ ದಂಪತಿ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪಿಎಸ್ಐ ಅನೀಲ್ ಎಂ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.