78 ವರ್ಷದ ಮೊಟ್ಟೆಗದ್ದೆಯ ನಾರಾಯಣ ವೆಂಕಟ್ರಮಣ ಭಟ್ಟರು 50 ವರ್ಷಕ್ಕೂ ಅಧಿಕ ಕಾಲದಿಂದ ಕಲಾ ಸೇವೆಯಲ್ಲಿದ್ದಾರೆ. ಈಗಲೂ ಅವರು ಉತ್ಸಾಹದಿಂದ ತಾಳಮದ್ಧಲೆಗಳಲ್ಲಿ ಅರ್ಥದಾರಿಗಳಾಗಿ ಭಾಗವಹಿಸುತ್ತಿದ್ದು, ಯುವ ಕಲಾವಿದರ ಪಾಲಿಗೆ ಮಾರ್ಗದರ್ಶಕರಾಗಿದ್ದಾರೆ.
ಯಲ್ಲಾಪುರ ತಾಲೂಕಿನ ಮೊಟ್ಟೆಗದ್ದೆಯ ನಾರಾಯಣ ವೆಂಕಟ್ರಮಣ ಭಟ್ಟರ ಮುಖ್ಯವೃತ್ತಿ ಪೌರೋಹಿತ್ಯ. ಅದರ ಜೊತೆ ಕೃಷಿ ಕಾಯಕವನ್ನು ಅವರು ಬಿಟ್ಟಿಲ್ಲ. ಇದರೊಂದಿಗೆ ತಮ್ಮೊಳಗಿನ ಕಲಾವಿದನನ್ನು ಸಹ ಅವರು ಪೋಷಿಸಿಕೊಂಡು ಬಂದಿದ್ದಾರೆ. ಕರಡಿಪಾಲ ಶಾಲೆಯಲ್ಲಿ 4ನೇ ತರಗತಿವರೆಗೆ ಓದಿದ ನಂತರ ಕುಂಬಾರಕುಳಿ ನಾಗೇದ್ರ ಭಟ್ಟರಲ್ಲಿ ಕಾಲೋಚಿತ, ಅಪರ ಹಾಗೂ ಜ್ಯೋತಿಷ ಅಭ್ಯಾಸ ಮಾಡಿದ ಅವರು ಸಿದ್ದಾಪುರದ ನೆಲೆಮಾವು ಮಠದಲ್ಲಿ ಸೂರಿ ರಾಮಚಂದ್ರ ಶಾಸ್ತ್ರಿ ಹಾಗೂ ಸದಾಶಿವ ಶಾಸ್ತ್ರಿಗಳ ಬಳಿ ಸಂಸ್ಕೃತ ಪ್ರಥಮ, ಕಾವ್ಯ ಹಾಗೂ ಹಿಂದಿ ವ್ಯಾಸಂಗ ಮಾಡಿದ್ದಾರೆ.
ನಾರಾಯಣ ಭಟ್ಟರ ತಂದೆ ಯಕ್ಷಗಾನ ಅರ್ಥಧಾರಿಗಳಾಗಿದ್ದರು. ಅವರಿಂದ ಪ್ರೇರಣೆಗೆ ಒಳಗಾದ ಇವರು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ನೆಲೆಮಾವು ಪಾಠಶಾಲೆಯಲ್ಲಿದ್ದ ವೇಳೆ ಸ್ಥಳೀಯರಾದ ಸೂರಿ ಭಟ್ಟರು, ಅಧ್ಯಾಪಕರಾದ ಸದಾಶಿವ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಅರ್ಥಗಾರಿಕೆ ಆರಂಭಿಸಿದರು. ಊರಿಗೆ ಮರಳಿದ ಮೇಲೆ ಪೌರೋಹಿತ್ಯದೊಂದಿಗೆ ಅರ್ಥಗಾರಿಕೆ ಮುಂದುವರಿಸಿದರು. ಅವರಿಗೆ ತಂದೆ ವೆಂಕಟರಮಣ ಭಟ್ಟರು, ಬಾಲಿಗದ್ದೆ ತಿಮ್ಮಣ್ಣ ಭಟ್ಟ ದ್ವಯರು, ಸಣ್ಣಣ್ಣ ಭಾಗವತರು, ಜವಳೆಕೆರೆ ನರಸಿಂಹ ಭಟ್ಟ, ನಾರಾಯಣ ಭಟ್ಟ ವೈದಿಕರಮನೆ, ಶಿವರಾಮ ಭಟ್ಟ ಚಿನಗಾರ ಮೊದಲಾದವರ ಜೊತೆ ವೇದಿಕೆ ದೊರೆಯಿತು.
ಕರಡಿಪಾಲ ಶಾಲೆಯಲ್ಲಿ ಸ್ಥಳೀಯ ಕಲಾವಿದರೇ ಸೇರಿ `ಯಕ್ಷಗಾನ ಮಂಡಳಿ ಮಾಗೋಡ’ ಎಂಬ ಹೆಸರಿನ ತಂಡ ಕಟ್ಟಿದ್ದರು. ಅದರಲ್ಲಿ ಇವರು ನಿರಂತರವಾಗಿ ತಾಳಮದ್ದಲೆ ಮಾಡುತ್ತಿದ್ದರು. ಅಲ್ಲಿ ಹತ್ತಾರು ವರ್ಷಗಳ ಕಾಲ ನಾರಾಯಣ ಭಟ್ಟರು ಅರ್ಥಧಾರಿಯಾಗಿ ಪಾಲ್ಗೊಂಡಿದ್ದಾರೆ. ಹೆಚ್ಚಾಗಿ ಮಾಗೋಡ, ನಂದೊಳ್ಳಿ ಸುತ್ತಮುತ್ತಲಿನ ತಾಳಮದ್ದಲೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ನಂದೊಳ್ಳಿ, ಚಂದಗುಳಿ, ಅಣಲಗಾರ, ಗುಂಡ್ಕಲ್ ಮೊದಲಾದ ಕಡೆ ಸನ್ಮಾನವನ್ನು ಸ್ವೀಕರಿಸಿದ್ದಾರೆ.
ಕರ್ನಾಟಕ ಕಲಾ ಸನ್ನಿಧಿ