ಸುಮಾರು 2 ಸಾವಿರ ವರ್ಷಗಳ ಹಿಂದಿನ ಇತಿಹಾಸವಿರುವ ಅಮದಳ್ಳಿಯ ಉದ್ಬವ ಗಣಪತಿಗೆ ಬೆಳ್ಳಿ ಮುಖ ಕವಚ ಧರಿಸಿ ಮೊದಲ ಪೂಜೆ ಸಲ್ಲಿಸಲಾಯಿತು.
ರಾಜ್ಯದ ಕೆಲವೇ ಕೆಲವು ಉದ್ಬವ ಗಣಪತಿಗಳಲ್ಲಿ ಅಮದಳ್ಳಿಯ ಗಣಪತಿ ಸಹ ಒಂದು. ಯಾವುದೇ ಕೆತ್ತನೆಗಳಿಲ್ಲದೇ ನಿಸರ್ಗ ನಿರ್ಮಿತ ಕಲ್ಲಿನಿಂದ ಮೂರ್ತಿಯಿರುವುದು ಇಲ್ಲಿನ ವಿಶೇಷ. ಅತ್ಯಂತ ಶಕ್ತಿಶಾಲಿ ಗಣಪತಿ ಎಂದು ಪ್ರಸಿದ್ಧಿ ಪಡೆದ ಗಣಪನ ಮುಂದೆ ಬೇಡಿಕೊಂಡರೆ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ದೇಶದ ನಾನಾ ಭಾಗಗಳಿಂದ ಭಕ್ತರು ಬಂದು ಇಲ್ಲಿ ನಡೆದುಕೊಳ್ಳುತ್ತಾರೆ.
`ಉಡುಪಿ ಮೂಲದ ಅಧಿಕಾರಿಯೊಬ್ಬರಿಗೆ ಕನಸಿನಲ್ಲಿ ಗಣಪತಿ ಕಾಣಿಸಿದ್ದು, ಅವರು ಅಮದಳ್ಳಿ ಭಾಗದಲ್ಲಿ ಓಡಾಡಿದಾಗ ಅಲ್ಲಿ ಈ ವಿಗ್ರಹ ಕಾಣಿಸಿತು. ಜ್ಯೋತಿಷ್ಯರಲ್ಲಿ ವಿಚಾರಿಸಿದಾಗ ಅಲ್ಲಿ ಗಣಪತಿ ದೇವರು ಇರುವುದು ಖಚಿತವಾಯಿತು’ ಎಂಬ ಕಥೆ ಇಲ್ಲಿದೆ. ಅದರ ಪ್ರಕಾರ ಮೊದಲು ಇಲ್ಲಿ ಚಿಕ್ಕ ಗುಡಿಯಿತ್ತು. 1984ರಲ್ಲಿ ಇಲ್ಲಿ ದೇವಾಲಯ ಸ್ಥಾಪನೆಯಾಯಿತು. ಅಮದಳ್ಳಿಯ ವೀರ ಗಣಪತಿ ವಿಶಿಷ್ಟವಾದ ಶಕ್ತಿ ಹೊಂದಿದ್ದು, ಇಲ್ಲಿ ನಾಗದೇವತಾ, ಚೌಡೇಶ್ವರಿ, ಯಕ್ಷಿಣಿ ದೇವರ ಮೂರ್ತಿ ಇದೆ. ನಿತ್ಯ ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಮಹಾಪೂಜೆ ನಡೆಯುತ್ತದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಇಲ್ಲಿನ ಖಾಯಂ ಭಕ್ತರು. ಸ್ಥಳೀಯರು ಸಹ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಬೆಳಿಗ್ಗೆ ಐದು ಗಂಟೆಗೆ ದೇವಾಲಯ ಬಾಗಿಲು ತೆರೆಯುತ್ತದೆ. ತ್ರಿಕಾಲ ಪೂಜೆ ನಡೆಸಲಾಗುತ್ತದೆ. ಪ್ರತಿ ಸೋಮವಾರ ಇಲ್ಲಿ ವಿಶೇಷ ಪೂಜೆ, ಸಂಕಷ್ಟಿ ದಿನ ಸಂಭ್ರಮ. ಏಕಾದಶಿ ಹೊರತುಪಡಿಸಿ ಪ್ರತಿ ದಿನವೂ ಐದು ತೆಂಗಿನಕಾಯಿ ಗಣಹೋಮ ನಡೆಯುತ್ತದೆ.
ನೈಸರ್ಗಿಕ ಗಣಪತಿಗೆ ಬೆಳ್ಳಿ ಮುಖ ಕವಚ ಧರಿಸಿ ಪೂಜೆ ಸಲ್ಲಿಸಿದ ವಿಡಿಯೋ ಇಲ್ಲಿ ನೋಡಿ…