ಯಲ್ಲಾಪುರ: ಕಂಪ್ಲಿ ತೋಟಗದ್ದೆ ಹಾಗೂ ಉಮ್ಮಚ್ಗಿಯ ಹಾಸಣಗಿ ಬೆಟ್ಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಡಿದ ಮೂವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರ ಬಳಿಯಿದ್ದ 7.52 ಲಕ್ಷ ರೂ ಮೌಲ್ಯದ ಶ್ರೀಗಂಧವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಬೈದೆಹಕ್ಲದ ಕಮಲಾಕರ ಶಂಕರ ಸಿದ್ದಿ, ಗೋರ್ಸಗದ್ದೆಯ ಗಣೇಶ ಪುತ್ತು ಸಿದ್ದಿ ಹಾಗೂ ಹಾಸಣಗಿಯ ರವಿಚಂದ್ರ ಸೀತಾರಾಮ ಶೆಟ್ಟಿ ಎಂಬಾತರು ಶ್ರೀಗಂಧದ ಮರ ಕಡಿದಿದ್ದರು. ಅದನ್ನು ನಾಲ್ಕು ತುಂಡುಗಳಾಗಿಸಿ ಅಡಗಿಸಿಟ್ಟಿದ್ದರು. ಇನ್ನೊಂದು ಮರವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿಸಿದ್ದರು. ಇದನ್ನು ಕಾಡಿನ ಕಾಲುವೆ, ಮರದ ಸಂದಿ ಸೇರಿ ಬೇರೆ ಬೇರೆ ಕಡೆ ದಾಸ್ತಾನು ಮಾಡಿದ್ದರು.
ವಲಯ ಅರಣ್ಯಾಧಿಕಾರಿ ಬಸವರಾಜ ಬಚ್ಚೊಳ್ಳಿ ಜೊತೆ ಅರಣ್ಯ ಸಿಬ್ಬಂದಿ ಪವನ ಲೋಕರ್, ಜ್ಯೋತಿ ಪ್ರಧಾನಿ, ವೀರಾಜ ನಾಯಕ, ಬೀರಪ್ಪ ಪಟಗಾರ ಇದನ್ನು ಪತ್ತೆ ಮಾಡಿದರು. ಅರಣ್ಯ ಪಾಲಕ ಶಂಕರ್ ಬಸರಗಿ ಹಾಗೂ ವಾಹನ ಚಾಲಕ ಗಂಗಾಧರ ರೆಡ್ಡಿ ಸಹ ಕಾಡಿನಲ್ಲಿ ಹುಡುಕಾಟ ನಡೆಸಿದರು. ಒಟ್ಟು 125 ಕೆಜಿಯಷ್ಟು ಶ್ರೀಗಂಧದ ಮರದ ಚಕ್ಕೆ ಹಾಗೂ ತುಂಡುಗಳು ದೊರೆತವು.
ಮೂವರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದು, ಅವರ ವಿಚಾರಣೆ ನಡೆಯುತ್ತಿದೆ.