ಮನೆ ಕೆಲಸ ಮಾಡಿಕೊಂಡಿದ್ದ ಸುಮನಾ ನಾಯ್ಕ ಅವರು ಶೌಚಾಲಯದಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ.
ಕುಮಟಾ ತಾಲೂಕಿನ ಹಳ್ಳಕಾರದಲ್ಲಿ ಸುಮನಾ ನಾಯ್ಕ (60) ವಾಸವಾಗಿದ್ದರು. ಫೆ 21ರಂದು ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಈ ನಡುವೆ ಶೌಚಾಲಯಕ್ಕೆ ತೆರಳಿ ಅಲ್ಲಿಂದ ಅಡುಗೆ ಮನೆಗೆ ಬರುವ ವೇಳೆ ಕಾಲು ಜಾರಿ ಬಿದ್ದರು.
ಪರಿಣಾಮ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಕೂಡಲೇ ಅವರನ್ನು ಕುಮಟಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಅದೇ ದಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾಕಷ್ಟು ಪ್ರಯತ್ನ ನಡೆಸಿದರೂ ಸುಮನಾ ನಾಯ್ಕ ಚೇತರಿಸಿಕೊಳ್ಳಲಿಲ್ಲ. ಫೆ 25ರಂದು ಅವರು ಕೊನೆ ಉಸಿರೆಳೆದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಸುಮನಾ ಅವರ ಪುತ್ರಿ ಅಂಕಿತಾ ನಾಯ್ಕ ಪೊಲೀಸರಿಗೆ ವರದಿ ಒಪ್ಪಿಸಿದರು. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.