ಶಿರಸಿಯ ಬನವಾಸಿ ಬಳಿಯ ಬೆಂಗಳೆ ಬಳಿಯ ಮಂಟಗಾಲ ಕೆರೆಯಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಮಗಳ ಸಾವು ಕಂಡ 70 ವರ್ಷದ ವೃದ್ಧರು ಕಣ್ಣೀರಾಗಿದ್ದಾರೆ.
ಬನವಾಸಿಯ ಬೆಂಗಳೆ ಬಳಿ ವಾಸವಾಗಿದ್ದ ರೇಖಾ ಗಂಗಾಮತ (39) ಅವರು ಭಾನುವಾರ ಅಲ್ಲಿನ ಮಂಟಗಾಲ ಕೆರೆಗೆ ಹೋಗಿದ್ದರು. ಅವರಿವರ ಮನೆಯ ಕೂಲಿ ಕೆಲಸ ಮಾಡಿಕೊಂಡಿದ್ದ ರೇಖಾ ಅವರು ಬಟ್ಟೆ ತೊಳೆಯುವ ಉದ್ದೇಶಕ್ಕಾಗಿ ಅವರು ಬುಟ್ಟಿ ತುಂಬ ಬಟ್ಟೆಯನ್ನು ಒಯ್ದಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕೆರೆಗೆ ಬಿದ್ದರು.
ಕೆರೆ ಕಡೆ ಹೋಗಿದ್ದ ರೇಖಾ ಮರಳಿ ಬಾರದ ಬಗ್ಗೆ ಅವರ ಗೆಳತಿ ಗೀತಾ ಪೂಜಾರಿ ಅನುಮಾನಗೊಂಡರು. ಗೀತಾ ಪೂಜಾರಿ ಅವರು ಕೆರೆ ಕಡೆ ಹೋಗಿ ಹುಡುಕಾಟ ನಡೆಸಿದಾಗ ರೇಖಾ ಅವರು ಕಾಣಲಿಲ್ಲ. ಅದಾದ ನಂತರ ರೇಖಾ ಅವರು ಬಟ್ಟೆ ತಂದಿದ್ದ ಬುಟ್ಟಿ, ಮೊಬೈಲ್ ಹಾಗೂ ಚಪ್ಪಲಿ ಬಿಟ್ಟ ಸ್ಥಳದಲ್ಲಿ ಕಾಲು ಜಾರಿ ಬಿದ್ದಿರುವ ಕುರುಹು ಕಾಣಿಸಿತು.
ಕೂಡಲೇ ಗೀತಾ ಅವರು ಊರ ಕಡೆ ಓಡಿದರು. ರೇಖಾ ಅವರು ನೀರಿಗೆ ಬಿದ್ದ ಬಗ್ಗೆ ಅಲ್ಲಿದ್ದವರಿಗೆ ವಿಷಯ ಮುಟ್ಟಿಸಿದರು. ಅದಾದ ನಂತರ ರೇಖಾ ಅವರ ತಂದೆ ಸೀನಾ ಪೂಜಾರಿ (70) ಅವರಿಗೆ ಸುದ್ದಿ ಮುಟ್ಟಿಸಿದರು. ಸೀನಾ ಪೂಜಾರಿ ಅವರು ಸ್ಥಳಕ್ಕೆ ಬರುವ ವೇಳೆಗೆ ಊರಿನವರೆಲ್ಲ ಸೇರಿ ರೇಖಾ ಅವರ ಶವ ಮೇಲೆತ್ತಿದ್ದರು.
ಮಗಳನ್ನು ಕಳೆದುಕೊಂಡ ಸೀನಾ ಪೂಜಾರಿ ಅವರು ಕಣ್ಣೀರಾದರು. ಘಟನಾವಳಿಗಳ ಬಗ್ಗೆ ಬನವಾಸಿ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದರು.