18 ಲಕ್ಷ ರೂ ಬೆಲೆಯ ಜರ್ಮನ್ ದೇಶದ ಯಂತ್ರವನ್ನು ಯಲ್ಲಾಪುರದ ರೊಹಿತ್ ಗುಡಿಗಾರ್ ಅವರು ಬರೇ 2 ಲಕ್ಷ ರೂ ವೆಚ್ಚದಲ್ಲಿ ಸಿದ್ಧಪಡಿಸಿದ್ದಾರೆ. ಈ ಯಂತ್ರ ತಯಾರಿಕೆಗಾಗಿ ಅವರು 2 ತಿಂಗಳ ಕಾಲ ಶ್ರಮಿಸಿದ್ದಾರೆ.
ಜರ್ಮನ್ ದೇಶದವರು ಕಬ್ಬಿಣ ಬಳಸಿ ಮಾಡಿದ್ದ ಯಂತ್ರವನ್ನು ರೋಹಿತ್ ಗುಡಿಗಾರ್ ಅವರು ಕಟ್ಟಿಗೆ ಬಳಸಿ ಮಾಡಿದ್ದಾರೆ. ಅದೇ ವೇಗ, ಅದೇ ಬಗೆಯ ಕರಕುಶಲತೆಯೊಂದಿಗೆ ಕೆಲಸ ಮಾಡಿದರೂ ಕಬ್ಬಿಣದ ಯಂತ್ರದಿoದ ಆಗಬಹುದಾದ ವಿದ್ಯುತ್ ಅವಘಡದ ಆತಂಕ ಈ ಮರದ ಯಂತ್ರಕ್ಕೆ ಇಲ್ಲ.
ಗುಡಿಗಾರ ಕುಟುಂಬದವರು ತಲತಲಾಂತರಗಳಿoದ ಕರಕುಶಲ ಸಿದ್ದಪಡಿಸುವಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕುಟುಂಬದವರು ಸಿದ್ದಪಡಿಸಿದ ಮರದ ಕೆತ್ತನೆಗಳು ದೇಶ-ವಿದೇಶಗಳಲ್ಲಿ ಪ್ರಸಿದ್ಧಿಪಡೆದಿದೆ. ಈ ಕುಟುಂಬದ ಕುಡಿ ರೋಹಿತ್ ಗುಡಿಗಾರ್ ಅವರು ಬಾಲ್ಯದಲ್ಲಿಯೇ ಕರಕುಶಲ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅನ್ವಷಣೆ ಎಂಬುದು ಅವರಿಗೆ ರಕ್ತಗತವಾಗಿ ಬಂದಿದೆ.
25 ವರ್ಷಗಳ ಹಿಂದೆಯೇ ಆ ಕಾಲದ ಆಧುನಿಕತೆಯನ್ನು ಅಳವಡಿಸಿಕೊಂಡಿರುವ ಗುಡಿಗಾರರು ಜರ್ಮನ್ ತಂತ್ರಜ್ಞಾನದ ಮರಕೆತ್ತನೆಯ ಯಂತ್ರವನ್ನು ಖರೀದಿಸಿದ್ದರು. ಆ ವೇಳೆ ಅದಕ್ಕೆ 18 ಲಕ್ಷ ರೂ ನೀಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರದ ಗುಡುಗಾರರನ್ನು ಹೊರತುಪಡಿಸಿ ಬೇರೆ ಯಾರಲ್ಲಿಯೂ ಈ ಬಗೆಯ ಯಂತ್ರವಿರಲಿಲ್ಲ. ಕಬ್ಬಿಣದಿಂದ ಸಿದ್ದಪಡಿಸಲಾದ ವಿದೇಶಿ ಯಂತ್ರ ವಿದ್ಯುತ್ ಆಧಾರದಲ್ಲಿ ಕೆಲಸ ಮಾಡುವುದಾಗಿದ್ದು, ವಿದ್ಯುತ್ ಆಘಾತಗಳ ಆತಂಕವಿತ್ತು. ಹೀಗಾಗಿ ಅದೇ ಜರ್ಮನ್ ತಂತ್ರಜ್ಞಾನದ ಬಗ್ಗೆ ದೇಶಿಯವಾಗಿ ಅಧ್ಯಯನ ನಡೆಸಿದ ರೋಹಿತ್ ಗುಡಿಗಾರ್ ಅವರು ಕಬ್ಬಿಣದ ಬದಲು ಅದೇ ಯಂತ್ರವನ್ನು ಮರದ ಕಟ್ಟಿಗೆಯಿಂದ ಸಿದ್ದಪಡಿಸಿದರು.
ಹೊನ್ನೆ ಮರವನ್ನು ಬಳಸಿ ಸಿದ್ದಪಡಿಸಿದ ಈ ಸಿಎನ್ಸಿ ಕಾವಿಂಗ್ ಯಂತ್ರ ಸಾವಿರಕ್ಕೂ ಅಧಿಕ ವಿನ್ಯಾಸಗಳನ್ನು ಹೊಂದಿದ ಕೆತ್ತನೆಯನ್ನು ಮಾಡಲು ಸಿದ್ಧವಾಗಿದೆ. ಕಳೆದ ಆರು ತಿಂಗಳಿoದ ಪ್ರಾಯೋಗಿಕ ಕೆಲಸವನ್ನು ಮಾಡುತ್ತಿದೆ. ಈವರೆಗೂ ಯಂತ್ರದಲ್ಲಿ ಯಾವುದೇ ದೋಷ ಕಾಣಿಸಿಕೊಂಡಿಲ್ಲ. ಯಂತ್ರಕ್ಕೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಯಾವುದೇ ದೋಷ ಕಂಡರೂ ಅದಕ್ಕೆ ಕ್ಷಣಮಾತ್ರದಲ್ಲಿ ಪರಿಹಾರ ಒದಗಿಸುವಷ್ಟರ ಮಟ್ಟಿಗೆ ರೋಹಿತ್ ಗುಡಿಗಾರ ಅವರು ಪರಿಣಿತಿಪಡೆದಿದ್ದಾರೆ. ಯಂತ್ರದ ವಿನ್ಯಾಸವನ್ನು ಸ್ವತ: ಸಿದ್ದಪಡಿಸಿರುವ ರೋಹಿತ್ ಗುಡಿಗಾರ್ ಅವರು ಆ ಯಂತ್ರ ಸಿದ್ದಪಡಿಸಬೇಕಿರುವ ವಿನ್ಯಾಸದ ಮಾದರಿಗಳನ್ನು ತಯಾರಿಸಿ ಕೊಡುತ್ತಾರೆ. ರೋಹಿತ್ ಗುಡಿಗಾರ್ ಅವರು ನೀಡಿದ ಸೂಚನೆಗಳ ಪ್ರಕಾರ ಆ ಯಂತ್ರ ಕೆತ್ತನೆ ಕೆಲಸವನ್ನು ನಿಭಾಯಿಸುತ್ತದೆ. ಅಂತಿಮವಾಗಿ ಅವರು ಆ ಕೆತ್ತನೆಗಳ ಮೇಲೆ ತಮ್ಮ ಕೈಚಳಕದಿಂದ ಕರಕುಶಲ ವಿನ್ಯಾಸ ನೀಡುತ್ತಾರೆ.
ರೋಹಿತ್ ಗುಡಿಗಾರ್ ಅವರು ಸಿದ್ದಪಡಿಸಿದ ಯಂತ್ರದ ಮೇಲೆ `ದೇವಿ ಟೆಕ್ನಾಲಜಿ’ ಎಂದು ಬರೆಯಲಾಗಿದೆ. ಇದರೊಂದಿಗೆ ಕಾಳಿ ದೇವಿಯನ್ನು ಸ್ಮರಿಸಿ `ಮೇಕ್ ಇನ್ ಭಾರತ್’ ಎಂದು ಅಚ್ಚೊತ್ತಲಾಗಿದೆ. `ದುಬಾರಿ ಬೆಲೆಯ ಯಂತ್ರವನ್ನು ದೇಶಿಯವಾಗಿ ಸಿದ್ದಪಡಿಸುವುದಕ್ಕಾಗಿ ಪ್ರಯತ್ನಿಸಿದ್ದು, ಅದು ಯಶಸ್ವಿಯಾಗಿದೆ. ವಿದೇಶಿ ಯಂತ್ರದ ಜೊತೆ ಸ್ವತಃ ಸಿದ್ದಪಡಿಸಿದ ಯಂತ್ರ ಸಹ ಬಳಕೆಯಾಗುತ್ತಿದೆ’ ಎಂದು ರೋಹಿತ ಗುಡಿಗಾರ್ ವಿವರಿಸಿದರು.