ನಿರಂತರ ಹೋರಾಟದ ಪರಿಣಾಮವಾಗಿ ಭಿಕ್ಷೆ ಬೇಡಿ ಜೀವನ ನಡೆಸುವ ರೇಣುಕಾ ಗೌಡ ಅವರಿಗೆ ಆಧಾರ್ ಕಾರ್ಡ ಸಿಕ್ಕಿದೆ.
ಕುಮಟಾದ ಮಾಸೂರು ಕ್ರಾಸಿನ ಜನತಾ ಪ್ಲೋಟಿನ ಬಳಿ ರೇಣುಕಾ ಗೌಡ ವಾಸವಾಗಿದ್ದಾರೆ. ಭಿಕ್ಷೆ ಬೇಡಿ ಜೀವನ ನಡೆಸುವ ಅವರ ಬಳಿ ಆಧಾರ್ ಕಾರ್ಡ ಸಹ ಇರಲಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ದೊರೆಯುತ್ತಿರಲಿಲ್ಲ. ಶಕ್ತಿ ಯೋಜನೆ ಅಡಿ ಬಸ್ಸಿನಲ್ಲಿ ಪ್ರಯಾಣ ನಡೆಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ವಿಷಯ ಅರಿತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ರೇಣುಕಾ ಗೌಡ ಅವರನ್ನು ಸರ್ಕಾರಿ ಕಚೇರಿಗೆ ಕರೆದೊಯ್ದು ಆಧಾರ್ ಕಾರ್ಡಿಗೆ ಅರ್ಜಿ ಹಾಕಿಸಿದ್ದರು. ಸಾಕಷ್ಟು ವಿಚಾರಣೆ-ಅಡೆತಡೆ ಎದುರಿಸಿದ ನಂತರ ಕೊನೆಗೂ ಅವರಿಗೆ ಆಧಾರ್ ಕಾರ್ಡ ಸಿಕ್ಕಿತು.
ಆಧಾರ್ ಕಾರ್ಡ ಹೊಂದಿದ ಕಾರಣ ರೇಣುಕಾ ಗೌಡ ಅವರು ಹೊಸ ರೇಶನ್ ಕಾರ್ಡ ಪಡೆಯಬಹುದಾಗಿದ್ದು, ಅಕ್ಕಿ ಯೋಜನೆಯ ಫಲಾನುಭವಿಯಾಗುವ ಅವಕಾಶ ಸಿಕ್ಕಿದೆ. ಗೃಹಲಕ್ಷಿ ಯೋಜನೆ ಜೊತೆ 5 ಲಕ್ಷ ರೂ ಮೌಲ್ಯದ ಆರೋಗ್ಯ ಕಾರ್ಡ ಪಡೆಯಲು ಅವರು ಅರ್ಹತೆ ಪಡೆದಿದ್ದಾರೆ. ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದಿoದಲೇ ಈ ಯೋಜನೆಗೆ ಅರ್ಜಿ ಹಾಕಿಸುವುದಾಗಿ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಘೋಷಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಜೊತೆಗಿದ್ದರು.