ಮುಂಡಗೋಡ: ಭದ್ರಾಪುರ ಗ್ರಾಮದ ಕೊಡಂಬಿ ಕ್ರಾಸಿನಲ್ಲಿ ಮಹಾದ್ವಾರ ಕಟ್ಟುವ ವೇಳೆ ಅವಘಡ ನಡೆದಿದೆ. ಮಹಾದ್ವಾರ ನಿರ್ಮಿಸುತ್ತಿದ್ದ ಶಿಲ್ಪಿ ಹಾಗೂ ಕೆಲಸಗಾರರು ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಾವಣಗೆರೆಯ ಬಸವರಾಜ ನಾಗರಾಜಪ್ಪ ಎಂಬಾತರು ಇಲ್ಲಿ ಮಹಾದ್ವಾರ ನಿರ್ಮಿಸುವ ಗುತ್ತಿಗೆ ಪಡೆದಿದ್ದರು. ಅವರು ದಾವಣಗೆರೆಯ ಶಿಲ್ಪಿಗಳಾದ ಕಾರ್ತಿಕ ರಾಜು, ಈರಪ್ಪ ಬಾಬಣ್ಣ, ಕರಿಯಪ್ಪ ಹನುಮಂತಪ್ಪ ಹಾಗೂ ಕುಮಾರ ಗೋಪಾಲ ಎಂಬಾತರನ್ನು ಕೆಲಸಕ್ಕೆ ನೇಮಿಸಿದ್ದರು. ಆದರೆ, ಯಾರಿಗೂ ಯಾವುದೇ ಸಲಕರಣೆ ನೀಡಿರಲಿಲ್ಲ.
ಮಹಾದ್ವಾರದ ಕೆಲಸ ಮಾಡುವ ವೇಳೆ ದ್ವಾರದ ಮೇಲ್ಬಾಗ ಹಾದು ಹೋದ ವಿದ್ಯುತ್ ತಂತಿ ಗಮನಿಸದೇ ಈರಪ್ಪ ಅದನ್ನು ಸ್ಪರ್ಶಿಸಿದರು. ವಿದ್ಯುತ್ ಶಾಕ್ ತಗುಲಿ ಅವರು ನೆಲಕ್ಕೆ ಬಿದ್ದರು. ಇದರೊಂದಿಗೆ ಇತರೆ ಕೆಲಸಗಾರರು ಸಹ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ನೋವು ಅನುಭವಿಸಿದರು. ನೆಲಕ್ಕೆ ಬಿದ್ದ ಈರಪ್ಪ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಸಲಕರಣೆ ನೀಡದೇ ಕೆಲಸ ಮಾಡಿಸಿಕೊಂಡ ಬಸವರಾಜ ನಾಗರಾಜಪ್ಪ ವಿರುದ್ಧ ಕಾರ್ಮಿಕ ಕಾರ್ತಿಕ್ ದೂರು ನೀಡಿದ್ದಾರೆ.