ಕಾರವಾರ: ರಾಷ್ಟೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಅಮದಳ್ಳಿಯಲ್ಲಿ ಎರಡು ಕಾರುಗಳ ನಡುವೆ ಶುಕ್ರವಾರ ಸಂಜೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ಜಖಂ ಆಗಿದ್ದು, ಐ ಆರ್ ಬಿ ಕಂಪನಿ ವಿರುದ್ಧ ಸಿಡಿದೆದ್ದ ಜನ ಹೆದ್ದಾರಿ ಮೇಲೆ ದಿಢೀರ್ ಪ್ರತಿಭಟನೆ ನಡೆಸಿದರು.
ರಸ್ತೆ ಅಪಘಾತದಲ್ಲಿ ಜಖಂ ಆದ ಕಾರುಗಳನ್ನು ತೆರವು ಮಾಡಲು ಅವಕಾಶ ನೀಡದ ಜನ ಐ ಆರ್ ಬಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. `ಸ್ಥಳದಲ್ಲಿ ಸೂಕ್ತ ಸೇತುವೆ ನಿರ್ಮಿಸದ ಕಾರಣ ಈ ಅಪಘಾತ ನಡೆದಿದೆ. ಅಪಘಾತಕ್ಕೆ ಕಾರಣವಾದ ಗುತ್ತಿಗೆ ಕಂಪನಿ ಐ ಆರ್ ಬಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರ ಜೊತೆಯೂ ಅನೇಕರು ವಾಗ್ವಾದ ನಡೆಸಿದರು. ಪೊಲೀಸರು `ಹೆದ್ದಾರಿ ತಡೆ ಮಾಡಬೇಡಿ’ ಎಂದು ಮನವಿ ಮಾಡಿದರೂ ಅದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿದ ಕಂಪನಿಯವರು ಇಲ್ಲಿ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಲೇ ಇದ್ದರು.
ಮುಕ್ಕಾಲು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆದ ಪರಿಣಾಮ ಹೆದ್ದಾರಿಯ ಎರಡು ಬದಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೊನೆಗೆ ಪೊಲೀಸರು ಪ್ರತಿಭಟನಕಾರರ ಮನವೊಲೈಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಕಳೆದ ಬಾರಿ ಅಪಘಾತವಾದಾಗ ಸಹ ಜನ ಪ್ರತಿಭಟಿಸಿದ್ದರು. ಆಗ ಒಂದು ತಿಂಗಳ ಒಳಗೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ನಂತರ ಯಾರೂ ಕ್ರಮ ಜರುಗಿಸಿರಲಿಲ್ಲ. ಇಲ್ಲಿನ ಸೇತುವೆ ನಡುವೆ ನೀರು ಸರಬರಾಜು ಘಟಕದ ವಾಲ್ ಬಂದಿದ್ದು, ರಸ್ತೆ ಮಾಡುವ ಮೊದಲು ಅದರ ಸ್ಥಳ ಬದಲಾವಣೆ ಮಾಡಿಲ್ಲ. ವಾಹನ ಸಂಚರಿಸುವಾಗ ದಿಢೀರ್ ಆಗಿ ವಾಲ್ ಎದುರಾಗುವುದರಿಂದ ವಾಹನವೂ ಚಾಲಕರ ನಿಯಂತ್ರಣ ತಪ್ಪಿ ಪದೇ ಪದೇ ಅಪಘಾತವಾಗುತ್ತಿದೆ.
ಅಪಘಾತ ಹಾಗೂ ಪ್ರತಿಭಟನೆಯ ವಿಡಿಯೋ ಇಲ್ಲಿ ನೋಡಿ..