ಶಿರಸಿ: `ಟಿಎಸ್ಎಸ್ ಮಾನ ಕಳೆಯಲು ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಗೊಬ್ಬರದ ವಿಷಯವಾಗಿ ಸಹ ಇದೇ ನಡೆದಿದೆ. ಗೊಬ್ಬರ ವಿಷಯವಾಗಿ ಅನಗತ್ಯ ಗೊಂದಲ ಹುಟ್ಟಿಸಿ ಸಂಸ್ಥೆಯ ಮಾನ ಕಳೆದವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಲಾಗುತ್ತದೆ’ ಎಂದು ಟಿಎಸ್ಎಸ್ ಆಡಳಿತ ಮಂಡಳಿ ಹೇಳಿಕೊಂಡಿದೆ.
`ಟಿಎಸ್ಎಸ್ ಕೃಷಿ ವಿಭಾಗದಲ್ಲಿ ಮಾರಾಟ ಮಾಡಲಾಗುತ್ತಿದ್ದ ಕೃಷಿಮಿತ್ರ ಗೊಬ್ಬರ ಕಳಪೆ’ ಎಂದು ಕೆಲವರು ದೂರಿದ್ದರು. ಇದಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಗೊಬ್ಬರವನ್ನು ಪರಿಶೀಲನೆಗೆ ರವಾನಿಸಿದ್ದು, ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆದಿತ್ತು. ಪ್ರಸ್ತುತ ಅದರ ವರದಿ ಹೊರಬಿದ್ದಿದೆ. `ಈ ಗೊಬ್ಬರ ನಿಗದಿತ ಮಾನದಂಡಕ್ಕೆ ಅನುಗುಣವಾಗಿದೆ’ ಎಂದು ವರದಿಯಲ್ಲಿರುವ ಬಗ್ಗೆ ಟಿಎಸ್ಎಸ್ ಹೇಳಿಕೊಂಡಿದೆ.
`ಟಿಎಸ್ಎಸ್ ಕೃಷಿ ವಿಭಾಗದಲ್ಲಿ ಮಾರಾಟ ಮಾಡುತ್ತಿರುವ ಕೃಷಿ ಮಿತ್ರ(14-06-21) ಗೊಬ್ಬರವು ಕಳಪೆ ಎಂದು ಕೆಲವರು ಕೃಷಿ ಉಪನಿರ್ದೇಶಕರಿಗೆ ದೂರು ನೀಡಿದ್ದರು. ವಿನಯ ಹೆಗಡೆ ಕ್ಯಾದಗಿಮನೆ, ಮಹಾಬಲೇಶ್ವರ ಹಗಡೆ ಕಿರವಾಳ, ಪ್ರಶಾಂತ ಹೆಗಡೆ ಕಲಗದ್ದೆ, ಗೋಪಾಲಕೃಷ್ಣ ಹೆಗಡ ಅಮ್ಮಿನಳ್ಳಿ, ರಾಜೇಂದ್ರ ಭಟ್ಟ ಗೋಳಿಕೊಪ್ಪ, ವಿಘ್ನಶ್ವರ ಹೆಗಡೆ ಹಿರೇಸರ, ಸುಬ್ರಾಯ ಹೆಗಡೆ ಹಾರೂಗಾರ ಕಿಬ್ಬಳ್ಳಿ ನಾಗಪತಿ ಹೆಗಡೆ ಶಿರಗೋಡ, ಮಂಜುನಾಥ ಭಟ್ಟ ಹೊಸ್ತೋಟ ಹಾಗೂ ಮಂಜುನಾಥ ಹೆಗಡೆ ಕುಂಬ್ರಿಜಡ್ಡಿ ಎಂಬಾತರ ದೂರಿನ ಅನ್ವಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಜೊತೆಗೆ ಗೊಬ್ಬರ ಮಾರಾಟಕ್ಕೂ ತಡೆ ನೀಡಿದ್ದರು.
ಅದಾದ ನಂತರ ಗೊಬ್ಬರ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದರು. `ಇದೀಗ ವರದಿ ಬಂದ ಹಿನ್ನಲೆ ಗೊಬ್ಬರ ಮಾರಾಟಕ್ಕೆ ನೀಡಿದ ತಡೆಯನ್ನು ಹಿಂಪಡೆಯಲಾಗಿದೆ. ಕೃಷಿ ಹಂಗಾಮಿನಲ್ಲಿ ಸಂಘದ ಸದಸ್ಯರಿಗೆ ಹಾಗೂ ಸಂಘಕ್ಕೆ ಹಾನಿ ಉಂಟು ಮಾಡಿದ ಕಾರಣ ದೂರುದಾರರ ವಿರುದ್ಧವೇ ದೂರು ನೀಡುತ್ತೇವೆ’ ಎಂದು ಸಂಸ್ಥೆ ಹೇಳಿಕೊಂಡಿದೆ.