ದ್ವೀಪ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದ ವ್ಯಕ್ತಿಯೊಬ್ಬರು ದೋಣಿ ಮೂಲಕ ಜಮೀನಿಗೆ ತೆರಳುವಾಗ ನದಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಕುಮಟಾ ತಾಲೂಕಿನ ಮಾಸೂರಿನ ಈಶ್ವರ ಪಟಗಾರ (68) ಅವರು ಮಾಸೂರು ಕೂರ್ವೆ ದ್ವೀಪದಲ್ಲಿ ತಮ್ಮ ಭೂಮಿ ಹೊಂದಿದ್ದರು. ನಿತ್ಯ ಅಲ್ಲಿ ತೆರಳಿ ಅವರು ಕೃಷಿ ಕಾಯಕ ಮಾಡುತ್ತಿದ್ದರು. ಸಂಜೆ ಮತ್ತೆ ಮಾಸೂರಿನ ಮನೆಗೆ ಮರಳಿ ವಾಸಿಸುತ್ತಿದ್ದರು. ದ್ವೀಪಕ್ಕೆ ತೆರಳುವುದಕ್ಕಾಗಿ ಅವರು ಸ್ವಂತ ದೋಣಿಯನ್ನು ಹೊಂದಿದ್ದರು.
ಫೆ 20ರಂದು ಬೆಳಗ್ಗೆ 9 ಗಂಟೆಯ ಅವಧಿಗೆ ಕೃಷಿ ಕೆಲಸಕ್ಕಾಗಿ ಅವರು ತಮ್ಮ ದೋಣಿಯಲ್ಲಿ ದ್ವೀಪದ ಊರಿಗೆ ಹೊರಟರು. ಅಘನಾಶಿನಿ ನದಿಯಲ್ಲಿ ದೋಣಿಗೆ ಹುಟ್ಟು ಹಾಕುತ್ತಿದ್ದಾಗ ಏರಿಳಿತದ ಉಬ್ಬರಕ್ಕೆ ದೋಣಿ ಮುಗುಚಿತು. ಈಶ್ವರ ಪಟಗಾರ ಅವರು ನೀರು ಪಾಲಾದರು. ಜೀವ ರಕ್ಷಣೆಗಾಗಿ ಅವರಿಗೆ ಆ ವೇಳೆ ಏನೂ ಸಿಗಲಿಲ್ಲ. ನೀರಿನಲ್ಲಿ ಮುಳುಗಿ ಅವರು ಅಲ್ಲಿಯೇ ಸಾವನಪ್ಪಿದರು.
ಸುಮಾರು 10 ಗಂಟೆಯ ಅವಧಿಗೆ ಈಶ್ವರ ಪಟಗಾರ ಅವರ ಮಗ ಬಾಲಚಂದ್ರ ಪಟಗಾರ ಜಮೀನಿಗೆ ಹೋಗುವವರಿದ್ದರು. ನದಿ ಬಳಿ ತಂದೆಯ ಶವ ನೋಡಿ, ಪೊಲೀಸರಿಗೆ ವಿಷಯ ಮುಟ್ಟಿಸಿದರು. ಆಕಸ್ಮಿಕ ಅವಘಡದ ಬಗ್ಗೆ ಪ್ರಕರಣ ದಾಖಲಿಸಿ ಶವ ಪಡೆದರು.