ಅಂಕೋಲಾ ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡರೂ ಪರಿಹಾರ ಸಿಗದ 85 ವರ್ಷದ ಸರಸ್ವತಿ ಶೇಟ್ ಅವರ ಕುಟುಂಬದವರು ಸೋಮವಾರ ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಸರಸ್ವತಿ ಅವರು 5.3 ಗುಂಟೆ ಕ್ಷೇತ್ರದ ಒಡೆಯರಾಗಿದ್ದಾರೆ. ಅಲ್ಲಿಯೇ ಅವರು ಮನೆ ನಿರ್ಮಿಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಾರೆ. ಅಲಗೇರಿ ಕ್ಷೇತ್ರದ ಪಹಣಿ ಪತ್ರಿಕೆಯಲ್ಲಿ ಅವರ ಹೆಸರಿದೆ. ಮನೆ ತೆರಿಗೆ ಪಾವತಿಸಿದ ರಸೀದಿಗಳು ಸಹ ಅವರ ಬಳಿಯಿದೆ. ಅವರ ಭೂಮಿ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನವಾಗಿದೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡು ಪರಿಹಾರ ಪಡೆಯುವವರ ಪಟ್ಟಿಯಲ್ಲಿ ಅವರ ಹೆಸರಿಲ್ಲ!
ಈ ಹಿನ್ನಲೆ ಫೆ 17ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸರಸ್ವತಿ ಶೇಟ್ ಹಾಗೂ ಅವರ ಮಗ ನೀಲಕಂಠ ಶೇಟ್ ಜೊತೆ ಜಿಲ್ಲಾಡಳಿತಕ್ಕೆ ತೆರಳಿ ತಮಗಾದ ಅನ್ಯಾಯದ ಬಗ್ಗೆ ವಿವರಿಸಿದರು. ಈ ಬಗ್ಗೆ ಅಧಿಕೃತ ದೂರು ಸಲ್ಲಿಸಿದರು. ತಮಗಾದ ಅನ್ಯಾಯದ ಬಗ್ಗೆ 4 ವರ್ಷಗಳಿಂದ ಎಸಿ ಕಚೇರಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಹಿಂಬರಹ ಬಾರದ ಬಗ್ಗೆ ಆಕ್ಷೇಪವ್ಯಕ್ತಪಡಿಸಿದರು.
ಸರಸ್ವತಿ ಶೇಟ್ ಅವರಿಗೆ ನ್ಯಾಯ ಕೊಡಿಸಿ ಎಂದು ಆಗ್ನೇಲ್ ರೋಡ್ರಿಗಸ್ ಮನವಿ ಮಾಡಿದರು. `20 ದಿನದ ಒಳಗೆ ಸರಸ್ವತಿ ಅವರ ಹೆಸರು ಪರಿಹಾರ ಪಟ್ಟಿಯಲ್ಲಿರಬೇಕು’ ಎಂದು ಡೀಸಿ ಆದೇಶಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಹಿರಿಯ ನಾಗರಿಕರಾದ ಅನಿಲ್ ವರ್ಣೇಕರ, ಜೋನ್ ಬೇರೇಟ್ಟೋ, ಬಾಬು ಅಂಬಿಗ ಇತರರು ಇದ್ದರು.