ಕುಮಟಾ: ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿನಿ0ದ ಒಂಟೆಗಳನ್ನು ಕಟ್ಟಲಾಗಿದೆ. ಪ್ರವಾಸಿಗರನ್ನು ಹೊತ್ತು ಕಡಲ ತೀರದಲ್ಲಿ ಸಂಚಾರ ನಡೆಸಲು ಒಂಟೆಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ!
ಕಡಲತೀರಕ್ಕೆ ಆಗಮಿಸುವ ಕೆಲವರು ಎತ್ತರದ ಒಂಟೆಗಳ ಮೇಲೆ ಕುಳಿತು ತಿರುಗಾಟ ಮಾಡಲು ಬಯಸುತ್ತಾರೆ. ಒಂಟೆಗಳ ಮೇಲೆ ಮಕ್ಕಳನ್ನು ಕೂರಿಸಿ ಸಮುದ್ರದ ಗಾಳಿ ಅನುಭವಿಸುತ್ತಾರೆ. ಪ್ರವಾಸಿಗರು ನೀಡುವ ಹಣದಿಂದ ಮಾಲಕರು ಒಂಟೆಗಳನ್ನು ಸಾಕುತ್ತಾರೆ. ಅದೇ ಹಣವನ್ನು ಉಳಿಸಿ ಅವರು ಜೀವನ ನಡೆಸುತ್ತಿದ್ದರು. ಆದರೆ, ಒಂಟೆ ತಂದು ತಿಂಗಳಾದರೂ ಸಂಚಾರಕ್ಕೆ ಅನುಮತಿ ಸಿಗದ ಕಾರಣ ಒಂಟೆಯ ಆಹಾರಕ್ಕೂ ಮಾಲಕರು ತೊಂದರೆ ಅನುಭವಿಸುತ್ತಿದ್ದಾರೆ.
ಕಾಸು ಕೊಟ್ಟರೆ ಮಾತ್ರ ಅನುಮತಿ!
ಕಡಲ ತೀರದಲ್ಲಿ ಒಂಟೆ ಸಂಚಾರಕ್ಕೆ ಮೊದಲು ವಾರ್ಷಿಕ 12 ಸಾವಿರ ರೂ ಪಾವತಿಸಬೇಕಿತ್ತು. ಇದಕ್ಕೆ ಗ್ರಾ ಪಂ ಅಧಿಕೃತ ರಸೀದಿಯನ್ನು ನೀಡುತ್ತಿತ್ತು. ಅದನ್ನು ಒಂಟೆ ಸಾಕಾಣಿಕೆದಾರರು ಪಾವತಿಸುತ್ತಿದ್ದರು. ಆದರೆ, ಇದೀಗ `ತಿಂಗಳುಗಳ ಕಾಲ ಒಂಟೆ ಓಡಾಡಿಸದೇ ಇದ್ದರೆ ನಿಮಗೆ ಲಕ್ಷಾಂತರ ರೂ ನಷ್ಟವಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ ನಮಗೆ ಪ್ರತಿ ತಿಂಗಳು 15 ಸಾವಿರ ಕೊಡಿ. ತಕ್ಷಣ ಅನುಮತಿ ಸಿಗುತ್ತದೆ’ ಎಂದು ಅಧಿಕಾರಿಯೊಬ್ಬರು ಸ್ಥಳೀಯರೊಬ್ಬರ ಮೂಲಕ ಒಂಟೆ ಮಾಲಕರನ್ನು ಮಾತನಾಡಿಸಿದ್ದಾರೆ.
ಆದರೆ, `ಅಷ್ಟೊಂದು ಹಣ ಕೊಡಲು ಆಗುವುದಿಲ್ಲ’ ಎಂದು ಒಂಟೆ ಸಾಕುವವರು ಚೌಕಾಸಿ ಮಾಡಿದ್ದಾರೆ. `ಕಾಸು ಕೊಡುವವರೆಗೂ ಅನುಮತಿ ಕೊಡಲ್ಲ’ ಎಂದು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದವರಿಗೆ `ಗ್ರಾ ಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಆಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ’ ಎನ್ನುತ್ತ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ.
ಒಂಟೆ ಮಾಲಕರು ಕಾರವಾರದ ಪ್ರವಾಸೋದ್ಯಮ ಕಚೇರಿಗೆ ತೆರಳಿ ತಮ್ಮ ಸಮಸ್ಯೆ ವಿವರಿಸಿದ್ದಾರೆ. ಪ್ರಾಣಿ ಹಿಂಸೆ ಆಗದ ರೀತಿ ನಿಬಂಧನೆಗೆ ಒಳಪಟ್ಟು ಅನುಮತಿ ಕೊಡಿಸುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ 4 ಒಂಟೆ ಹಾಗೂ 1 ಕುದುರೆ ಕಡಲತೀರದಲ್ಲಿ ನಿಂದಿದೆ. ತಿಂಗಳು ಕಳೆದರೂ ಅವುಗಳ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಒಂಟೆ ಮಾಲಕರು ಬಿಸಿಲಿನಲ್ಲಿ ಕಾಯುವುದು ತಪ್ಪಿಲ್ಲ!