ಕರೋನಾ, ಪೃಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗೆ ಬರುವ ಅನುದಾನ ಸರಿಯಾಗಿ ಬರುತ್ತಿಲ್ಲ. ಸರ್ಕಾರ ಪದೇ ಪದೇ ನಿಯಮ ಬದಲಿಸುತ್ತಿರುವುದರಿಂದ ಸ್ಥಳೀಯವಾಗಿ ಸಂಗ್ರಹಿಸಿದ ತೆರಿಗೆ ಹಣವನ್ನು ಸಹ ಆದ್ಯತೆಗೆ ಅನುಸಾರವಾಗಿ ಅಭಿವೃದ್ಧಿಗೆ ಬಳಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಗೆ ಆಯ್ಕೆಯಾದ ಪ್ರತಿನಿಧಿಗಳು ಅಧಿಕಾರವಿದ್ದರೂ ಅನುದಾನವಿಲ್ಲದೇ ಸೊರಗಿದ್ದಾರೆ!
ಸರ್ಕಾರದ ನಿಲುವು ಖಂಡಿಸಿ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಸೆ 26ರಂದು ಪ್ರತಿಭಟನೆಗೆ ನಿರ್ಧರಿಸಿದೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ `ಸರ್ಕಾರದಿಂದ ಹಣ ಬರದ ಕಾರಣ ಬಡವರಿಗೆ ಮನೆ ನೀಡಲು ಆಗುತ್ತಿಲ್ಲ. ಸ್ಥಳೀಯ ಗ್ರಾ ಪಂ ಪ್ರತಿನಿಧಿಗಳ ಬಗ್ಗೆ ಸರ್ಕಾರಗಳಿಗೆ ಕಿಂಚಿತ್ತು ಕಾಳಜಿಯಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. ಒಕ್ಕೂಟದ ಸದಸ್ಯ ಸುಬ್ಬಣ್ಣ ಕುಂಟೇಗಾಳಿ ಮಾತನಾಡಿ `15ನೇ ಹಣಕಾಸು ಯೋಜನೆ ಅಡಿ 3 ಬಾರಿ ಕ್ರಿಯಾಯೋಜನೆ ಮಾಡಿ ಕಳುಹಿಸಿದರೂ 13 ಲಕ್ಷ ರೂ ಕಡಿಮೆ ಬಂದಿದೆ. ಇದರಿಂದ ಸ್ಥಳೀಯ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ವಿವರಿಸಿದರು.
ಗಣೇಶ ಹೆಗಡೆ ಕುಂದರಗಿ, ಕೆ ಟಿ ಹೆಗಡೆ, ಮೀನಾಕ್ಷಿ ಭಟ್ಟ ಕೆಳಗಿನಪಾಲ್ ಸಹ ಸರ್ಕಾರದ ನೀತಿಯನ್ನು ಖಂಡಿಸಿದರು.