ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಲ್ಲ ಎಂದಾದರೆ ಶಿಷ್ಟಾಚಾರದ ನೆಪದಲ್ಲಿ ಬೊಬ್ಬೆ ಹೊಡೆಯುವ ಹಿರಿಯ ಜನಪ್ರತಿನಿಧಿಗಳು ಅಂಬೇಡ್ಕರ್ ಜಯಂತಿಗೆ ಆಹ್ವಾನ ನೀಡಿದರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ!
ಉತ್ತರ ಕನ್ನಡ ಜಿಲ್ಲಾಡಳಿತ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿದೆ. ಆದರೆ, ಈ ಕಾರ್ಯಕ್ರಮದಿಂದ ಸಚಿವ ಮಂಕಾಳು ವೈದ್ಯ ಹಾಗೂ ಸ್ಥಳೀಯ ಶಾಸಕ ಸತೀಶ್ ಸೈಲ್ ದೂರವುಳಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ ಕಾರ್ಯಕ್ರಮಕ್ಕೆ ಬರಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಇನ್ನೂ ಅನೇಕ ಜನಪ್ರತಿನಿಧಿಗಳ ಹೆಸರಿದ್ದು, ಅವರಲ್ಲಿ ಬಹುತೇಕರು ಕಾಣಿಸಿಕೊಳ್ಳಲಿಲ್ಲ.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿಯೇ ದಲಿತ ಮುಖಂಡರೊಬ್ಬರು ಈ ಬಗ್ಗೆ ಬಹಿರಂಗವಾಗಿ ಅಸಮಧಾನವ್ಯಕ್ತಪಡಿಸಿದರು. ಅದಕ್ಕೂ ಜನಪ್ರತಿನಿಧಿಗಳು ಖ್ಯಾರೇ ಅನ್ನಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿರುವ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಅವರ ಅನುಪಸ್ಥಿತಿ ಕಾರಣ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರು ಅಧ್ಯಕ್ಷತೆವಹಿಸಬೇಕಿತ್ತು. ಸತೀಶ್ ಸೈಲ್ ಸಹ ಬಾರದಿರುವುದರಿಂದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಧ್ಯಕ್ಷತೆವಹಿಸಿದರು.
ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗವಹಿಸಬೇಕಿತ್ತು. ಇದರೊಂದಿಗೆ ಜಿಲ್ಲೆಯ ಎಲ್ಲಾ ಶಾಸಕರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ವಿವಿಧ ಶಾಸಕರು ತಮ್ಮ ತಮ್ಮ ಕ್ಷೇತ್ರದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ, ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸತೀಶ್ ಸೈಲ್ ಮಾತ್ರ ದೂರವುಳಿದರು. ಉಸ್ತುವಾರಿ ಸಚಿವರು ಬಾರದಿರುವ ಬಗ್ಗೆಯೂ ಅಲ್ಲಿದ್ದ ಅನೇಕರು ಬೇಸರವ್ಯಕ್ತಪಡಿಸಿದರು.
ಹಿರಿಯ ಜನಪ್ರತಿನಿಧಿಗಳು ಸಭೆಯಿಂದ ದೂರ ಉಳಿದ ಬಗ್ಗೆ ನೌಕರರ ವಲಯದಲ್ಲಿಯೂ ಅಸಮಧಾನ ಕಾಣಿಸಿತು. ವಿವಿಧ ಸರ್ಕಾರಿ ಕಚೇರಿ ಅಧಿಕಾರಿ-ಸಿಬ್ಬಂದಿ ಅತ್ಯಂತ ಪ್ರಾಮಾಣಿಕವಾಗಿ ಈ ಜಯಂತಿಯಲ್ಲಿ ಭಾಗವಹಿಸಿದ್ದರು. ವಿವಿಧ ಸಂಘಟನೆಯವರು ಸಹ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.