ಶಿರಸಿ ಎಪಿಎಂಸಿ ಆವರಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾದ ಮೇಲೆ ಜೋರಾಗಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ರಿಕ್ಷಾದ ಒಳಗೆ ಚಾಲಕ ಸೇರಿ ಮೂವರು ಪ್ರಯಾಣಿಕರಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಮಿನಿ ವಿಧಾನಸೌಧ ಬಳಿ ರಿಕ್ಷಾ ನಿಲ್ದಾಣದ ರಿಕ್ಷಾ ಚಾಲಕ ವೆಂಕಟೇಶ್ ಅವರು ರಿಕ್ಷಾ ಓಡಿಸಿಕೊಂಡು ಹೋಗುತ್ತಿದ್ದರು. ಅವರ ರಿಕ್ಷಾದಲ್ಲಿ ಮೂವರು ಪ್ರಯಾಣಿಕರು ಇದ್ದರು. ರಿಕ್ಷಾ ಎಪಿಎಂಸಿ ಆವರಣದ ಬಳಿ ತೆರಳುತ್ತಿದ್ದಾಗ ಏಕಾಏಕಿ ವಿದ್ಯುತ್ ಕಂಬ ಮುರಿದು ಬಿದ್ದಿತು. ವಿದ್ಯುತ್ ತಂತಿಗಳೆಲ್ಲವೂ ರಿಕ್ಷಾ ಮೇಲೆ ಹರಿದು ಬಿದ್ದವು.
ಈ ವೇಳೆ ತಂತಿಗಳ ಮೂಲಕ ವಿದ್ಯುತ್ ಸರಬರಾಜು ಆಗುತ್ತಿತ್ತು. ಪರಿಣಾಮ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಕಿಯೂ ಕಾಣಿಸಿಕೊಂಡಿತು. ತಕ್ಷಣ ವೆಂಕಟೇಶ್ ಅವರು ರಿಕ್ಷಾದಿಂದ ಹೊರ ಬಂದರು. ಜೊತೆಗೆ ಪ್ರಯಾಣಿಕರನ್ನು ಕೆಳಗಿಳಿಸಿ ಸಮಯ ಪ್ರಜ್ಞೆ ಮೆರೆದರು. ವಿಷಯ ಅರಿತು ಸ್ಥಳಕ್ಕೆ ಬಂದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದರು.
ರಿಕ್ಷಾ ನಿಧಾನವಾಗಿ ಚಲಿಸುತ್ತಿದ್ದು, ಪಕ್ಕದಲ್ಲಿ ದೊಡ್ಡ ಲಾರಿ ಸಂಚರಿಸುತ್ತಿತ್ತು. ಮುಂದೆಯೂ ಇನ್ನೊಂದು ಲಾರಿ ಸಂಚರಿಸುತ್ತಿತ್ತು. ವಿದ್ಯುತ್ ಕಂಬ ರಿಕ್ಷಾದ ಹಿಂದಿನಿoದ ಬಿದ್ದಿದ್ದರಿಂದ ದೊಡ್ಡ ಅನಾಹುತ ನಡೆಯಲಿಲ್ಲ.