ಕೊಂಡೆಮನೆ ಕಾಡಿನಲ್ಲಿ ಅಕ್ರಮ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ ದಾಳಿ ಮಾಡಿದ್ದಾರೆ. ಒಟ್ಟು 8 ಜನ ಜೂಜಾಟಗಾರರು ಸ್ಥಳದಲ್ಲಿಯೇ ಸಿಕ್ಕಿ ಬಿದ್ದಿದ್ದು, 14 ಸಾವಿರ ರೂ ಹಣ ಸೇರಿ 1 ಲಕ್ಷಕ್ಕೂ ಅಧಿಕ ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ಅವರಿಂದ ವಶಕ್ಕೆ ಪಡೆದಿದ್ದಾರೆ.
ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಕೊಂಡೆಮನೆ ಅರಣ್ಯ ಪ್ರದೇಶದಲ್ಲಿ ಮಾರ್ಚ 7ರ ರಾತ್ರಿ ಒಂದಷ್ಟು ಜನ ಇಸ್ಪಿಟ್ ಆಡುತ್ತಿದ್ದರು. ಇಸ್ಪಿಟ್ ಎಲೆಗಳ ಜೊತೆ 14170ರೂ ಹಣವನ್ನು ಅವರು ಹರಡಿಕೊಂಡಿದ್ದರು. ಈ ವಿಷಯ ಅರಿತ ಪಿಎಸ್ಐ ಸಿದ್ದಪ್ಪ ಗುಡಿ ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು.
ಆಗ, ಮಂಜುನಾಥ ನಗರದ ಆಟೋ ಚಾಲಕ ಹರಿಗುರು ದೇವಳಿ (44) ನೂತನ ನಗರ ಜಡ್ಡಿಯ ಚಾಲಕ ಅಬ್ದುಲ್ ರೆಹಮಾನ್ (38), ಕೂಲಿ ಕೆಲಸ ಮಾಡುವ ರವಿ ಮಹಾಲೆ (48), ವಾಸುದೇವ ಜಾದವ್ (38) ಮಣಿಕುಮಾರ ಪಟಗಾರ (28), ಅಶೋಕ ಮಳ್ಳೂರಿ (32) ಗೌಂಡಿ ಕೆಲಸಗಾರ ಗೌರೀಶ ಆಚಾರಿ (28) ಹಾಗೂ ರವೀಂದ್ರ ನಗರದ ಕೂಲಿಯಾಳು ಸಂತೋಷ ಮರಾಠಿ (48) ಸಿಕ್ಕಿ ಬಿದ್ದರು. ಅಲ್ಲಿ ಹರಡಿಕೊಂಡಿದ್ದ ಇಸ್ಪಿಟ್ ಎಲೆ, ಹಣವನ್ನು ಪೊಲೀಸರು ಜಪ್ತು ಮಾಡಿದರು.
ಆ ಎಂಟು ಜನರನ್ನು ತಡಕಾಡಿದಾಗ 7 ಮೊಬೈಲ್ ಫೋನ್ ಸಿಕ್ಕಿತು. ಜೂಜಾಟಗಾರರಿಗೆ ಸಂಬoಧಿಸಿದ ಮೂರು ಬೈಕುಗಳು ಕಾಡಿನ ಅಂಚಿನಲ್ಲಿದ್ದವು. ಅವೆಲ್ಲವನ್ನು ಸೇರಿ ಒಟ್ಟು 104670ರೂ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು. ಸಿಕ್ಕಿಬಿದ್ದ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಪೊಲೀಸ್ ಸಿಬ್ಬಂದಿ ರಾಘವೇಂದ್ರ ನಾಯಕ ತನಿಖೆ ನಡೆಸುತ್ತಿದ್ದಾರೆ.