ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ನೀಡುವ ಬದಲು ಅಕ್ಕಿ ನೀಡುವ ಪದ್ಧತಿ ಮುಂದುವರೆಸಲು ನಿರ್ಧರಿಸಿದೆ. ಈ ಅಕ್ಕಿ ಮಾರಾಟ ಮಾಡಿರುವುದು ಗಮನಕ್ಕೆ ಬಂದರೆ ಅಂಥವರ ಪಡಿತರ ಚೀಟಿ ರದ್ಧು ಮಾಡುವುದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಎಚ್ಚರಿಸಿದ್ದಾರೆ.
`2025ರ ಫೆಬ್ರವರಿ ತಿಂಗಳಿನಿoದ ಅನ್ವಯವಾಗುವಂತೆ ಪ್ರತಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಿಸಲು ಆದೇಶಿಸಲಾಗಿದೆ. ಫೆಬ್ರವರಿ ತಿಂಗಳ ಅಕ್ಕಿಯನ್ನು ಮಾರ್ಚ ತಿಂಗಳಿನ ಜೊತೆ ಹೊಂದಾಣಿಕೆ ಮಾಡಿ ನೀಡಲಾಗುತ್ತದೆ. ಮಾರ್ಚ 1ರಿಂದ ಅಕ್ಕಿ ವಿತರಣೆ ಕಾರ್ಯ ಶುರುವಾಗಿದ್ದು ತಿಂಗಳ ಕೊನೆಯವರೆಗೂ ಅಕ್ಕಿ ವಿತರಿಸಲಾಗುತ್ತದೆ’ ಎಂದವರು ಮಾಹಿತಿ ನೀಡಿದ್ದಾರೆ.
`ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು. ಇ-ಕೆವೈಸಿ ಆಗದವರು ಅದನ್ನು ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರಿಗೆ ಯಾವುದೇ ಶುಲ್ಕವಿಲ್ಲ’ ಎಂದು ಅವರು ತಿಳಿಸಿದ್ದಾರೆ. `ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದವರ ವಿರುದ್ಧ ಕ್ರಮ ಅನಿವಾರ್ಯ. ಅಂಥವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
`ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು ಹಾಗೂ ಸಾಗಾಣಿಕೆ ಮಾಡುವವರ ವಿರುದ್ಧವೂ ಕ್ರಮ ಜರುಗಿಸಾಗುತ್ತದೆ. ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು 1967ಕ್ಕೆ ಕರೆ ಮಾಡಿ’ ಎಂದು ಸಂದೇಶ ರವಾನಿಸಿದ್ದಾರೆ.