ಹಬ್ಬ-ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಒಂದಷ್ಟು ಸಮಾನ ಮನಸ್ಕರು ತಿಂಗಳಿನಲ್ಲಿ ಒಂದು ದಿನ ಆಸ್ಪತ್ರೆ, ಅನಾಥ ಮಕ್ಕಳು, ವೃದ್ಧರು ಹಾಗೂ ಅಶಕ್ತರಿಗೆ ಹಬ್ಬದ ಊಟ ಬಡಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.
ಯಲ್ಲಾಪುರದ ಟಿಎಸ್ಎಸ್ ಆವಾರದಲ್ಲಿ ಬೇಕರಿ ನಡೆಸುತ್ತಿರುವ ಹೊನಗದ್ದೆಯ ದಯಾನಂದ ಹೆಗಡೆ ಈ ಸೇವೆಯ ರೂವಾರಿ. ಕೃಷಿ ಇಲಾಖೆಯ ಎದುರು ಹಣ್ಣಿನ ಅಂಗಡಿ ನಡೆಸುತ್ತಿರುವ ಸಂದ್ಯಾ ಹೆಗಡೆ, ಕಾವೇರಿ ವೆಲ್ಡಿಂಗ್’ನ ಸೂರ್ಯನಾರಾಯಣ ಭಟ್ಟ ಹಾಗೂ ನಂದೂಳ್ಳಿಯ ಶ್ರೀಪಾದ ಹೆಗಡೆ ಜೊತೆದಾರರು. ಇವರೆಲ್ಲರೂ ತಮ್ಮ ದುಡಿಮೆಯಿಂದ ಉಳಿದ ಹಣದಲ್ಲಿ ಒಂದಷ್ಟು ಒಟ್ಟುಗೂಡಿಸಿ ಅನ್ನದಾನ ಮಾಡುತ್ತಿದ್ದಾರೆ.
ಏಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಶುರುವಾದ ಈ ಕಾಯಕ ಕಳೆದ ವರ್ಷದಿಂದ ಯಲ್ಲಾಪುರಕ್ಕೂ ವಿಸ್ತರಣೆಯಾಗಿದೆ. ಅಂಗವಿಕಲರು, ಮಾನಸಿಕ ಅಸ್ವಸ್ಥರು, ವೃದ್ಧ-ವೃದ್ಧೆಯರು ಅಂದರೆ ಈ ತಂಡದವರಿಗೆ ಎಲ್ಲಿಲ್ಲದ ಕನಿಕರ. ಪ್ರೀತಿಯಿಂದ ಬಡಿಸಿ, ಊಟ ಹಾಕಿದವರು ಅಲ್ಲಿಂದ ಹೊರಡುವಾಗ ಆಶ್ರಮದಲ್ಲಿನ ವೃದ್ಧರು ತಮ್ಮ ಮಕ್ಕಳನ್ನು, ಚಿಣ್ಣರು ತಂದೆ-ತಾಯಿಯರನ್ನು ನೆನೆದು ಕಣ್ಣೀರು ಹಾಕಿದ್ದು ಇದೆ. ನಾಯ್ಕನಕೆರೆಯಲ್ಲಿರುವ ರಾಘವೇಂದ್ರ ಆಶ್ರಮ ಹಾಗೂ ಕಾಳಮ್ಮನಗರದಲ್ಲಿನ ವಿಠ್ಠಲ ವನವಾಸಿ ಆಶ್ರಮದಲ್ಲಿದ್ದವರು ಸಂತೃಪ್ತಿಯಿAದ ಊಟ ಮಾಡಿ ದಾನಿಗಳಿಗೆ ಹರಸುತ್ತಾರೆ.
ಬೆಂಗಳೂರಿನಲ್ಲಿ ಕೆಲವರು ತಮ್ಮ ತಮ್ಮ ಹುಟ್ಟುಹಬ್ಬದ ದಿನ ಬಡವರಿಗೆ ಊಟ ಕೊಡಿಸುತ್ತಿದ್ದರು. ಅಂಥವರೆಲ್ಲ ಪರಸ್ಪರ ಪರಿಚಯವಾಗಿ `ದಾನವೇ ಭೂಮಿಯಲ್ಲಿ ಶ್ರೇಷ್ಟ’ ಎಂಬ ಟ್ರಸ್ಟ್ ರಚಿಸಿಕೊಂಡು ಅವರವರ ಹುಟ್ಟುಹಬ್ಬದ ಬದಲು ತಿಂಗಳಿಗೆ ಒಮ್ಮೆ ಊಟ ಕೊಡುವ ಬಗ್ಗೆ ನಿರ್ಣಯಿಸಿದರು. 52 ಮಂದಿ ಈ ತಂಡದಲ್ಲಿದ್ದು, ಯಲ್ಲಾಪುರದ ನಾಲ್ವರು ಇಲ್ಲಿ ಆ ಪದ್ಧತಿಯನ್ನು ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿರುವ ಉಳಿದವರು ಅಲ್ಲಿನ ಹಲವು ಆಶ್ರಮಗಳಿಗೆ ಊಟ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಕೆಲಸ ಮಾಡುತ್ತಿರುವವರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯವರಿದ್ದು, ಅಲ್ಲಿನ ನಿವಾಸಿಗಳು ಸಹ ಇವರ ಜೊತೆಯಾಗಿದ್ದಾರೆ.
ಇಲ್ಲಿ ಅನ್ನ – ಸಾರು ಜೊತೆ ಸಿಹಿ ಮತ್ತು ಖಾರ ತಿನಿಸು, ತಂಬಳಿಯನ್ನು ಒಳಗೊಂಡ `ಹವ್ಯಕ’ ಶೈಲಿಯ ಊಟವನ್ನು ನೀಡಲಾಗುತ್ತದೆ. ಎಪಿಎಂಸಿ ಮುಂಬಾಗ ಕ್ಯಾಂಟಿನ್ ನಡೆಸುವ ಶ್ರೀಮಾತಾದ ಮಂಜಣ್ಣ ಇವರು ಹೇಳಿದಲ್ಲಿ ಊಟ ತೆಗೆದುಕೊಂಡು ಹೋಗುವ ಹೊಣೆ ಹೊತ್ತಿದ್ದಾರೆ. ಯುಗಾದಿ, ಶಿವರಾತ್ರಿ, ರಾಮನವಮಿ ಮೊದಲಾದ ಹಬ್ಬ ಇದ್ದಲ್ಲಿ ಹಬ್ಬದ ದಿನದಂದೇ ಊಟ ಬಡಿಸಲಾಗುತ್ತದೆ. ಇಷ್ಟೇ ಅಲ್ಲ, ಯಲ್ಲಾಪುರದಲ್ಲಿರುವ ಈ ನಾಲ್ವರು ಸೇರಿ ಕಳೆದ ವರ್ಷ ಶಾಲಾ ಮಕ್ಕಳಿಗೆ ಪಠ್ಯ ವಿತರಿಸಿದ್ದಾರೆ. ಪೌರ ಕಾರ್ಮಿಕರಿಗೂ ನೆರವು ನೀಡಿದ್ದಾರೆ.
– ಅಚ್ಯುತಕುಮಾರ ಯಲ್ಲಾಪುರ
Discussion about this post