ಕುಮಟಾ: ಗೋಕರ್ಣ ಅಶೋಕೆಯ ಸಸ್ಯ ಸಂಜೀವಿನಿಯ ಪೂಜೆ ವೇಳೆ ನಿತ್ಯ ನವಿಲು ಬರುತ್ತದೆ. ದೇವರಿಗೆ ಹೂವು ಮುಡಿಸಿ ಕಾಡಿಗೆ ಮರಳುತ್ತದೆ!
ಕೆಲವೊಮ್ಮೆ ಪೂಜೆ ಶುರುವಾಗುವ ಮುನ್ನ ಬರುವ ನವಿಲು ಪೂಜೆ ಮುಗಿಯುವವರೆಗೂ ಅಲ್ಲಿರುತ್ತದೆ. ಕೊನೆಗೆ ತನ್ನ ಕೊಕ್ಕಿನಿಂದ ಹೂವುಗಳನ್ನು ದೇವರಿಗೆ ಅರ್ಪಿಸಿ ಹಾರಿ ಹೋಗುತ್ತದೆ.
ಮಹರ್ಷಿ ದೈವರಾತರು ಇಲ್ಲಿಗೆ ಬಂದಾಗ ಪಶುಪತಿನಾಥ ವಿಗ್ರಹವನ್ನು ಸ್ಥಾಪಿಸಿದ್ದರು. ಆ ವಿಗ್ರಹಕ್ಕೆ ಪತಂಜಲಿ ಶರ್ಮ ಅವರು ನಿತ್ಯ ಪೂಜೆ ಮಾಡುತ್ತಾರೆ.
ಕಳೆದ ಐದು ವರ್ಷಗಳಿಂದ ನಿತ್ಯ ಪೂಜಾ ಅವಧಿಯಲ್ಲಿ ಇಲ್ಲಿ ನವಿಲು ಕಾಣಿಸಿಕೊಳ್ಳುತ್ತದೆ. ಪೂಜೆ ಮುಗಿದ ಕೊನೆಗೆ ತಾನೂ ಪುಷ್ಪ ಸಮರ್ಪಿಸಿ ನಮನ ಸಲ್ಲಿಸುತ್ತದೆ. ಪೂಜಾ ಅವಧಿ ಹೊರತುಪಡಿಸಿ ಬೇರೆ ಸಮಯದಲ್ಲಿ ನವಿಲು ಕಾಣಿಸಿಕೊಳ್ಳುವುದಿಲ್ಲ.
2006ರಲ್ಲಿ ಆ ಭಾಗದಲ್ಲಿ ನಾಲ್ಕು ನವಿಲುಗಳು ಗಾಯಗೊಂಡಿದ್ದವು. ಗಾಯಗೊಂಡ ನವಿಲುಗಳನ್ನು ಸಸ್ಯ ಸಂಜೀವಿನಿಯ ಸೌಮ್ಯಶ್ರೀ ಶರ್ಮ ಅವರು ರಕ್ಷಿಸಿದ್ದರು. ಚೇತರಿಸಿಕೊಂಡ ಬಳಿಕ ಆ ನವಿಲುಗಳೆಲ್ಲವೂ ಕಾಡು ಸೇರಿದ್ದು, ಪ್ರಸ್ತುತ ಒಂದು ನವಿಲು ಎಲ್ಲಿಯೇ ಇದ್ದರೂ ಪೂಜಾ ಗಂಟೆ ಸದ್ದಿಗೂ ಮುನ್ನ ಇಲ್ಲಿ ಹಾಜರು.