ಸಾರ್ವಜನಿಕ ಕೆಲಸ ಮಾಡಿಕೊಡಲು ಪದೇ ಪದೇ ಎಡವುತ್ತಿರುವ ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮುಖ್ಯಮಂತ್ರಿಯ ಮೊರೆ ಹೋಗಿದ್ದಾರೆ!
ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದೆ. `2023ರಲ್ಲಿಯೇ ನಾಗರಾಜ ನಾಯ್ಕರನ್ನು ಇಲ್ಲಿಂದ ವರ್ಗಾಯಿಸಿ’ ಎಂದು ಕೆಲವರು ಆಗ್ರಹಿಸಿದ್ದರು. ಈ ಬಗ್ಗೆ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದರು. ಆದರೂ, ಯಾವುದೇ ಕ್ರಮವಾಗದ ಕಾರಣ ಇದೀಗ ಮುಖ್ಯಮಂತ್ರಿಗಳಿಗೆ ಪತ್ರ ರವಾನೆಯಾಗಿದೆ.
ಗ್ರಾಮ ಪಂಚಾಯತದಲ್ಲಿ ಅವ್ಯವಹಾರ, ಕಾನೂನು ಸೇವಾ ಪ್ರಾಧಿಕಾರದ ಕೆಲಸದ ಬಗ್ಗೆ ಅಸಡ್ಡೆ, ಸಾರ್ವಜನಿಕರ ಜೊತೆ ಅನುಚಿತ ವರ್ತನೆ, ಅರ್ಜಿ ವಿಲೇವಾರಿಯಲ್ಲಿ ಲೋಪ, ಹಿರಿಯ ನಾಗರಿಕರ ಕೆಡಗಣನೆ, ಸರ್ಕಾರ ನೀಡಿದ ದೂರವಾಣಿ ನಾಪತ್ತೆ, ಸರ್ಕಾರಿ ಆಸ್ತಿ ನಿರ್ವಹಣೆಯಲ್ಲಿನ ಲೋಪ ಸೇರಿ ಹಲವು ಆರೋಪಗಳನ್ನು ನಾಗರಾಜ ನಾಯ್ಕ ವಿರುದ್ಧ ಮಾಡಲಾಗಿದೆ. ಸಾರ್ವಜನಿಕರು ಪಿಡಿಓ ಭೇಟಿ ಮಾಡಲು ತೆರಳಿದಾಗಲೆಲ್ಲ `ಮಿಟಿಂಗ್ ಹೋಗಿದ್ದಾರೆ’ ಎಂಬ ಉತ್ತರ ಬರುತ್ತದೆ. `ಫೋನ್ ಮಾಡಿದರೂ ಪಿಡಿಓ ಸರಿಯಾಗಿ ಉತ್ತರಿಸುತ್ತಿಲ್ಲ’ ಎಂದು ಜನ ಸಾಮಾನ್ಯರು ದೂರಿದ್ದಾರೆ.

`ಈಗಾಗಲೇ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಸಾರ್ವಜನಿಕ ಸೇವೆ ಮಾಡದ ಪಿಡಿಓ ಇಲ್ಲಿ ಅಗತ್ಯವಿಲ್ಲದ ಕಾರಣ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಪ್ರಮುಖರಾದ ಲಕ್ಷಿ ನಾಯ್ಕ, ಸುಶೀಲ, ರೇಣುಕಾ, ಈಶ್ವರ, ಸಿಂಪರಿಯನ್, ಸಂಜಯ ಹೊಲೆಯರ, ಗುರು ಮುಕ್ರಿ, ವಿಠ್ಠಲ್ ನಾಯ್ಕ, ಬೀರಪ್ಪ ಪಟಗಾರ ಇತರರು ಸಹಿ ಮಾಡಿದ ಅರ್ಜಿಯನ್ನು ಮುಖ್ಯಮಂತ್ರಿಗೆ ರವಾನಿಸಲಾಗಿದೆ.