ಯಲ್ಲಾಪುರ: ಅರಬೈಲ್ ಘಟ್ಟ ಪ್ರದೇಶದಲ್ಲಿ ಪದೇ ಪದೇ ಅಪಘಾತ ನಡೆಯುತ್ತಿರುವ ಬಗ್ಗೆ ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಅಧ್ಯಕ್ಷ ಸುಜಯ ಮರಾಠಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಮಳೆ ಮುಗಿದ ತಕ್ಷಣ ಮರು ಡಾಂಬರೀಕರಣ ನಡೆಸುವ ಭರವಸೆ ಸಿಕ್ಕಿದೆ.
ಲಾರಿ ಚಾಲಕ ಹಾಗೂ ಮಾಲಕ ಸಂಘದ ಪದಾಧಿಕಾರಿಗಳು ಬುಧವಾರ ಅರಬೈಲ್ ಪ್ರದೇಶಕ್ಕೆ ಭೇಟಿ ನೀಡಿದರು. ಅಲ್ಲಿ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಮಹೇಶ ನಾಯ್ಕ ಆಗಮಿಸಿದ್ದು, ಅವರಿಗೆ ಲಾರಿ ಮಾಲಕ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಮಹೇಶ ನಾಯ್ಕ ಸಮಸ್ಯೆಗಳನ್ನು ವಿವರಿಸಿದರು. ಸಂಘದ ಪ್ರಮುಖರಾದ ನಾಗೇಂದ್ರ ಭಟ್ಟ ಕವಾಳೆ, ಖಾಜಾ ಅಪ್ತಾರ್, ಸಾಧೀಕ್ ಹಾಗೂ ಅಮಿತ್ ನಾಯ್ಕ ಪ್ರಯಾಣಿಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸಿದರು.
`ಹೆದ್ದಾರಿಯಲ್ಲಿನ ಹೊಂಡಗಳನ್ನು ತಕ್ಷಣ ಮುಚ್ಚಬೇಕು. ಎತ್ತರ-ತಗ್ಗವಿರುವ ಸ್ಥಳಗಳನ್ನು ಸಮದಟ್ಟು ಮಾಡಿ ಸುಗಮ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸಂಘದ ಅಧ್ಯಕ್ಷ ಸುಜಯ ಮರಾಠಿ ಒತ್ತಾಯಿಸಿದರು. `ತಿರುವುಗಳಲ್ಲಿನ ಅಪಾಯದ ಪರಿಸ್ಥಿತಿ ತಪ್ಪಿಸಬೇಕು. ಮರುಡಾಂಬರಿಕರಣ ನಡೆಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ಇಂಜಿನಿಯರ್ ಮಹೇಶ ನಾಯ್ಕ `ಅರಬೈಲ್ ಮಾರುತಿ ದೇವಸ್ಥಾನದಿಂದ ಬೀರಗದ್ದೆ ದೇವಸ್ಥಾನದವರೆಗೆ ಮರುಡಾಂಬರಿಕರಣ ನಡೆಯಲಿದೆ. ಈ ಕೆಲಸಕ್ಕಾಗಿ ಹುಬ್ಬಳ್ಳಿಯ ಎನ್ ಬಿ ಹಿರೇಮಠ್ ಅವರಿಗೆ ಟೆಂಡರ್ ಆಗಿದ್ದು, ಮಳೆ ಮುಗಿದ ತಕ್ಷಣ ಕೆಲಸ ಶುರುವಾಗಲಿದೆ’ ಎಂದು ತಿಳಿಸಿದರು. `ಪ್ರಸ್ತುತ ಒಂದು ಜೆಸಿಬಿ ಯಂತ್ರದ ಮೂಲಕ ಹೆದ್ದಾರಿ ಸಮದಟ್ಟು ನಡೆಯುತ್ತಿದ್ದು, ಇನ್ನೊಂದು ಜೆಸಿಬಿ ಪಡೆದು ಕೂಡಲೇ ಆ ಕೆಲಸ ಮುಗಿಸಬೇಕು’ ಎಂದು ಸಂಘದವರು ಆಗ್ರಹಿಸಿದರು. ಅದಕ್ಕೂ ಅಧಿಕಾರಿ ಒಪ್ಪಿಗೆ ಸೂಚಿಸಿದರು. `4 ಇಂಚು ಮರುಡಾಂಬರೀಕರಣ ನಡೆಯಲಿದೆ’ ಎಂದು ಅಧಿಕಾರಿ ಮಹೇಶ ನಾಯ್ಕ ಮಾಹಿತಿ ನೀಡಿದರು.