ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಡಿಕೆಗೆ ವ್ಯಾಪಕ ಪ್ರಮಾಣದಲ್ಲಿ ಎಲೆಚುಕ್ಕಿ ರೋಗ ಹರಡುತ್ತಿದೆ. ಸದ್ಯ ಉಷ್ಣತೆ ಹೆಚ್ಚಿರುವುದರಿಂದ ರೋಗ ತಗ್ಗಿದರೂ, ವಾತಾವರಣದ ಏರಿಳಿತವಾದರೆ ಈ ವರ್ಷವೂ ಎಲೆಚುಕ್ಕಿ ಕಾಟ ತಪ್ಪಿದಲ್ಲ. ಇನ್ನೂ, ಎಲೆಚುಕ್ಕಿ ರೋಗಕ್ಕೆ ಪರಿಹಾರ ನೀಡಲು ಸರ್ಕಾರ ಅನುದಾನ ಮೀಸಲಿಟ್ಟರೂ ಅದಕ್ಕೆ ಅರ್ಜಿ ಸಲ್ಲಿಸುವವರೇ ಇಲ್ಲ!
ಎಲೆಚುಕ್ಕಿ ರೋಗ ಬಂದ ಒಂದು ಎಕರೆ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸಲು ಸರಿಸುಮಾರು 75 ಸಾವಿರ ರೂ ವೆಚ್ಚವಾಗುತ್ತದೆ. ಸರ್ಕಾರ ನೀಡುವ ಪರಿಹಾರ 480ರೂ ಮಾತ್ರ. ಇನ್ನೂ, ಗರಿಷ್ಟ 10 ಎಕರೆಗೆ 4800ರೂ ಪರಿಹಾರ ಪಡೆಯಲು ಮಾತ್ರ ಸಾಧ್ಯವಿದ್ದು, ಅದಕ್ಕೂ ಸಾಕಷ್ಟು ನಿಬಂಧನೆಗಳಿವೆ. 10 ಎಕರೆ ತೋಟ ಹೊಂದಿದವರ ಸಂಖ್ಯೆ ಇಲ್ಲದಿರುವುದು ಒಂದು ಸಮಸ್ಯೆ. ಔಷಧಿ ಖರೀದಿಸಿದ ಬಿಲ್, ಆಧಾರ್ ಕಾರ್ಡ ಸೇರಿ ವಿವಿಧ ದಾಖಲೆಗಳ ಜೊತೆ ಗ್ರಾಮೀಣ ಭಾಗದ ಜನ ಕಚೇರಿ ಅಲೆದಾಟ ನಡೆಸಬೇಕಾಗಿರುವುದು ಇನ್ನೊಂದು ಸಮಸ್ಯೆ. ಎಲ್ಲವೂ ಸೇರಿ ಅರ್ಜಿ ಸಲ್ಲಿಸಲು ಕನಿಷ್ಟ 500ರೂ ವೆಚ್ಚವಾಗುವುದರಿಂದ ಯಾರೂ ಎಲೆಚುಕ್ಕಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿವಹಿಸಿಲ್ಲ!
ಮಾಹಿತಿಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ 2023-24 ಹಾಗೂ 2024-25ನೇ ಸಾಲಿನಲ್ಲಿ 8500 ಹೆಕ್ಟೆರುಗಳಿಗಿಂತ ಹೆಚ್ಚಿನ ಪ್ರದೇಶದಲ್ಲಿನ ಅಡಿಕೆ ಬೆಳೆ ಎಲೆಚುಕ್ಕಿ ರೋಗಕ್ಕೆ ತುತ್ತಾಗಿದೆ. ಈ ಪ್ರದೇಶದ ಅನೇಕ ತೋಟಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಫಸಲು ಸಹ ಇಳಿಮುಖವಾಗಿದೆ. ಜೊತೆಗೆ ಹಲವು ಮರಗಳು ಸಾವನಪ್ಪಿವೆ. ಅಲ್ಲಿ-ಇಲ್ಲಿ ಎಂಬAತೆ ಕೆಲ ತೋಟಗಳು ಎಲೆಚುಕ್ಕಿ ರೋಗ ಬಂದರೂ ಸಾವನಪ್ಪದೇ ಬದುಕಿಕೊಂಡಿವೆ. ಈ ರೋಗದಿಂದ ಅಡಿಕೆ ಬೆಳೆಗಾರರು ಕೆಂಗಟ್ಟಿದ್ದು, ಆ ವೇಳೆ ಪರಿಹಾರಕ್ಕಾಗಿ ಸಾಕಷ್ಟು ಪ್ರತಿಭಟನೆ ನಡೆಸಿದ್ದರು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬ ಧ್ವನಿ ದೊಡ್ಡದಾಗಿತ್ತು.
ಅದರ ಪರಿಣಾಮವಾಗಿ ಸರ್ಕಾರ ಸಹಾಯಧನವನ್ನು ಘೋಷಿಸಿತು. ಆದರೆ, ಹಾನಿಗೆ ತಕ್ಕ ನೆರವು ಸಿಗುವ ನಿರೀಕ್ಷೆ ಹುಸಿಯಾಯಿತು. `ಎಲೆಚುಕ್ಕಿ ರೋಗ ಹರಡದಂತೆ ನಿಯಂತ್ರಣದಲ್ಲಿಡಲು ವಿವಿಧ ಔಷಧಿ ಸಿಂಪಡಿಸಬೇಕು. ಔಷಧಿ ಖರೀದಿಸಿದ ದಾಖಲೆ ಜೊತೆ ಭೂಮಿ ದಾಖಲೆಗಳನ್ನು ಅರ್ಜಿ ಜೊತೆ ಕೊಡಬೇಕು. ಒಂದು ಎಕರೆಗೆ ಮೂರು ಬಾರಿ ಸಿಂಪಡಣೆಗೆ ಔಷಧಿ ಮೊತ್ತವೇ 76 ಸಾವಿರ ರೂ ಆಗಲಿದ್ದು, ಸರ್ಕಾರ ನೀಡುವ ಪರಿಹಾರ 480ರೂ ಮಾತ್ರ’ ಎಂಬುದು ರೈತರ ಅಸಮಧಾನ.
`10 ಎಕರೆ ಹೊಂದಿದ ರೈತರಿಗೆ 4800ರೂ ಪರಿಹಾರ ಸಿಗುತ್ತದೆ. ಆದರೆ, ಜಿಲ್ಲೆಯಲ್ಲಿ 1-3 ಎಕರೆ ತೋಟ ಹೊಂದಿದವರೇ ಹೆಚ್ಚಿದ್ದು, ಅವರಿಗೆ ಸಿಗುವ ಪರಿಹಾರ ಸಾವಿರ ರೂ ಆಸುಪಾಸು. ಅರ್ಜಿ ಸಲ್ಲಿಸಲು ಅಗತ್ಯ ದಾಖಲೆ ಹೊಂದಿಸುವ ವೆಚ್ಚವೇ ದುಬಾರಿಯಾಗಿದ್ದರಿಂದ ಈವರೆಗೆ 50 ಅರ್ಜಿ ಸಹ ಪರಿಹಾರ ಕೋರಿ ಸಲ್ಲಿಕೆಯಾಗಿಲ್ಲ!