ಅಡಿಕೆ ಬೆಳೆಗಾರರಿಗೆ ನ್ಯಾಯಯುತವಾಗಿ ಬರಬೇಕಾದ ವಿಮಾ ಪರಿಹಾರ ಇನ್ನೂ ಬಂದಿಲ್ಲ. `ಇನ್ನೂ ಏಳು ದಿನಗಳಲ್ಲಿ ಬೆಳೆ ವಿಮೆ ಪರಿಹಾರ ಸಿಗುತ್ತದೆ’ ಎಂದು ಸಂಸದರು ನೀಡಿದ ಭರವಸೆ ಸಹ ಈಡೇರಿಲ್ಲ. ಹೀಗಾಗಿ ಸ್ವತಃ ಸಂಸದ ವಿಶ್ವೇಶ್ವರ ಹೆಗಡೆ ಮತ್ತೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಆದೇಶಕ್ಕೂ ವಿಮಾ ಕಂಪನಿ ತಲೆ ಕೆಡಿಸಿಕೊಳ್ಳದ ಬಗ್ಗೆ ದೂರಿದ್ದಾರೆ.
ಗುರುವಾರ ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿದರು. 2023-24ರ ಬೆಳೆ ವಿಮಾ ಪರಿಹಾರ ನಿಡಲು ಕ್ಷೇಮ ಇನ್ಸೂರೆನ್ಸ್ ಕಂಪನಿ ಆಸಕ್ತಿ ತೋರದ ಬಗ್ಗೆ ದೂರಿದರು. ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಆದ ಅನ್ಯಾಯದ ಬಗ್ಗೆ ಒತ್ತಿ ಹೇಳಿದರು. ಕೇಂದ್ರ ಸರ್ಕಾರ ಸೂಚನೆ ನೀಡಿದರೂ ವಿಮಾ ಕಂಪನಿ ಪರಿಹಾರ ನೀಡದ ಬಗ್ಗೆ ಸಚಿವರ ಗಮನಕ್ಕೆ ತಂದರು.
`ಕೇoದ್ರ ಸರ್ಕಾರದ ರೈತರ ಅನುಕೂಲಕ್ಕಾಗಿ ಮಹತ್ವದ ಯೋಜನೆ ಜಾರಿಗೆ ತಂದಿದೆ. ಆದರೆ, ತಾಂತ್ರಿಕ ದೋಷದ ನೆಪದಲ್ಲಿ ವಿಮಾ ಕಂಪನಿ ರೈತರನ್ನು ಕಾಡಿಸುತ್ತಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಿಸಿದರು.
`ಬೆಳೆ ವಿಮೆ ಹಣವು ರೈತರಿಗೆ ಅತ್ಯಂತ ಅಗತ್ಯವಾಗಿದೆ. ರಥತರ ಆರ್ಥಿಕ ಭದ್ರತೆಗೆ ಈ ಹಣ ಸಹಕಾರಿಯಾಗಲಿದೆ’ ಎಂದು ಮನವರಿಕೆ ಮಾಡಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ `ರೈತರಿಗೆ ಹಣ ಸಂದಾಯವಾಗುವoತೆ ಅಗತ್ಯ ಕ್ರಮ ಜರುಗಿಸುವೆ’ ಎಂಬ ಭರವಸೆ ನೀಡಿದರು.