ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂ ಕಂಪನ ಅನುಭವ ಆಗಿದ್ದರೂ ಅದು ಮಾಪನದಲ್ಲಿ ದಾಖಲಾಗಿಲ್ಲ. ಹೀಗಾಗಿ ಕಂಪನದ ಅಧ್ಯಯನಕ್ಕಾಗಿ ಸೋಮವಾರ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಲಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ ಅವರು S News’ ಡಿಜಿಟಲ್’ಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ.
ಭಾನುವಾರ ಮಧ್ಯಾಹ್ನ 11.50ರ ಆಸುಪಾಸಿಗೆ ಶಿರಸಿ, ಕುಮಟಾ, ಸಿದ್ದಾಪುರ ತಾಲೂಕಿನ ಕೆಲಭಾಗ ಹಾಗೂ ಯಲ್ಲಾಪುರದ ಚವತ್ತಿ ಭಾಗದ ಅನೇಕರಿಗೆ ಭೂ ಕಂಪನದ ಅನುಭವ ಆಗಿದೆ. ಎರಡು ಬಾರಿ ಗುಡುಗು ಹಾಗೂ ಮೂರು ಸೆಕೆಂಡ್ ಕಾಲದ ಕಂಪನವನ್ನು ಜನ ಅನುಭವಿಸಿದ್ದು, ಈ ಬಗ್ಗೆ ಭಾರೀ ಪ್ರಮಾಣದಲ್ಲಿ ಚರ್ಚೆ ನಡೆಸಿದ್ದಾರೆ. ಆದರೆ, ವಿಪತ್ತು ನಿರ್ವಹಣಾ ಕೋಶದಲ್ಲಿ ಭೂ ಕಂಪನದ ಬಗ್ಗೆ ದಾಖಲಾಗಿಲ್ಲ. ಉತ್ತರ ಕನ್ನಡ ಜಿಲ್ಲಾಡಳಿತ ಸಹ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸಂಪರ್ಕಿಸಿ `ಭೂ ಕಂಪನ ನಡೆದಿಲ್ಲ’ ಎಂಬ ಪ್ರಕಟಣೆ ನೀಡಿದೆ. ಈ ಬಗ್ಗೆ ಭಾನುವಾರ ಸಂಜೆ 8 ಗಂಟೆ ವೇಳೆಗೆ S News’ ಡಿಜಿಟಲ್ ಪ್ರತಿನಿಧಿ ಬಳಿ ಮಾಹಿತಿ ಪಡೆದಿದ್ದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ ಅವರು ಈ ಬಗ್ಗೆ ವಿವಿಧ ಅಧಿಕಾರಿಗಳ ಬಳಿ ಚರ್ಚಿಸಿದರು. ಅದಾದ ನಂತರ ರಾತ್ರಿ 10.17ಕ್ಕೆ `ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಬರಲಿದೆ’ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನು ಓದಿ: ಮಲೆನಾಡು ಬೆಟ್ಟ ಗಡ ಗಡ!
ಇದನ್ನು ಓದಿ: ಭೂ ಕಂಪನ | ಜನ ಹೇಳಿದ್ದು ಸುಳ್ಳಾ?!!
ಆದರೆ, ಸ್ವತ: ಕಂಪನದ ಅನುಭವ ಪಡೆದವರು ಜಿಲ್ಲಾಡಳಿತದ ಹೇಳಿಕೆಯನ್ನು ಜನ ನಂಬಲು ಸಿದ್ಧರಿಲ್ಲ. ಕಂಪನದ ಅನುಭವ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಪ್ರಕಟಣೆಯ ಬಗ್ಗೆ ಎಸ್ ನ್ಯೂಸ್ ಡಿಜಿಟಲ್ ವರದಿ ಪ್ರಸಾರ ಮಾಡಿದ್ದು, ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸ್ಪಷ್ಠನೆ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮೀ ಮಹೇಶ ಅವರು `ಸೂಪಾ ಹಾಗೂ ಬೆಳಗಾವಿ ಕೇಂದ್ರದಲ್ಲಿ ಸಹ ಕಂಪನ ದಾಖಲಾಗಿಲ್ಲ. ಅದಾಗಿಯೂ ಸೋಮವಾರ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳು ಭೂ ಕಂಪನ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
`ಯಾರೂ ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ ಅವರು ಹೇಳಿದ್ದಾರೆ.